ಸುದ್ದಿಜೀವಿ

ಸುದ್ದಿಜೀವಿ
ನಾಗೇಶರಾವ್

Thursday, December 16, 2010

ಮಲಬಾರ್ ಲಾಡ್ಜ್ ನಲ್ಲಿ ಮಸಾಲೆ ದೋಸೆಗೆ ಎರಡಾಣೆ ಆರು ಕಾಸು

.... ಮೂವತ್ತು ರೂಪಾಯಿ ತಿಂಗಳ ಸಂಬಳದ ಕೆಲ್ಸ ಸಿಗತ್ತೆ. ಜೂನಿಯರ್ ಮೋಸ್ಟ್ ಸಬ್ ಎಡಿಟರ್‌ಗೆ ಕಚೇರಿಯಲ್ಲಿ ಫೋನ್ ಮೂಲಕ ವಾರ್ತೆಗಳನ್ನು ಸ್ವೀಕರಿಸಿ ಬರೆಯಬೇಕು, ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳ ಪ್ರೂಫ್ ನೋಡಬೇಕು, ಯಜಮಾನರು ಇಂಗ್ಲಿಷ್‍ನಲ್ಲಿ ಬರೆದ ಆರ್ಟಿಕಲ್‍ಗಳನ್ನು ಟ್ರಾನ್ಸ್-ಲೇಟ್ ಮಾಡ್ಬೇಕು, ಬುಕ್ಸ್ ರೆವ್ಯೂ ಮಾಡ್ಬೇಕು. ಕಾಫಿ ಕುಡಿಯೋಕ್ಕೆ ಕಾಸಿಲ್ಲದ ಕಾಲ, ಸಂಬಳ ಎಂದು ಬರತ್ತೋ ಎಂದು ಕಾಯುವ ಕಾಲ. ಬೆಂಗಳೂರಿನಲ್ಲಿ ಬಾಡಿಗೆ ಮನೆಯೊಂದನ್ನು ಬೇಗ ಮಾಡು ಅಂತ ಅಮ್ಮನ ಒತ್ತಾಯ. ಶ್ರೀರಾಮಪುರ(?)ದ ಹೂವಮ್ಮನ ಮನೆ ವಠಾರದಲ್ಲಿ ಹತ್ತು ರೂಪಾಯಿ ಬಾಡಿಗೆಗೆ ಮನೆ ಸಿಗತ್ತೆ. ಊಟದ Aluminium ತಟ್ಟೆಗೆ ರೂ.1-11-0 ಕೊಡ್ಬೇಕಲ್ಲ ಅಂತ ಸಂಕಟ ಆದ್ರೂ ಖರೀದಿ ಮಾಡಿದ್ದಾಯ್ತು. ಹಾಗೆ ಬರ್ತಾ ಮಲಬಾರ್ ಲಾಡ್ಜ್ ನಲ್ಲಿ ಮಸಾಲೆ ದೋಸೆಗೆ ಎರಡಾಣೆ ಆರು ಕಾಸು ಕೊಡೋ ಬದಲು ಒಂದಾಣೆ ಕೊಟ್ಟು ಜಹಾಂಗೀರ್ ತಿನ್ನೋದು ವಾಸಿ ಅನ್ಸತ್ತೆ. ...

01 ಮಾರ್ಚ್ 1946

ಸೀನಾ Paperದು 1-6-0 ಕೊಟ್ಟ. ಅವನಿಗೆ ಕಾಫಿ ಕೊಡಿಸಿದೆ. Type. ಚಕ್ಕರ್.

02 ಮಾರ್ಚ್ 1946

ಶಿವರಾತ್ರಿ. ರಾಘವ ಸಿಗಲಿಲ್ಲ. ಸಂಜೆ ರವೀಂದ್ರ ಸಿಕ್ಕಿದ್ದ. ಸುಂದರ, ಗುಂಡ ಸಿಕ್ಕಿದ್ದು, ನಾಳೆ ಸಿಗ್ತೀನೆಂದೆ.

03 ಮಾರ್ಚ್ 1946

ಬೆಳಗ್ಗೆ ಏಳೋ ಹೋತ್ಗೆ ಶ್ರೀಪಾದು ಬಂದು ಕಕ್ಕ ಬಂದೀದಾರೇಂತ ಹೇಳಿದ. ಅಮ್ಮ ನಾಳೆ ಬರ್ತಾಳಂತೆ. ತೋಟ 850ಕ್ಕೆ ಖರೀದಿ, ಮೂರು ತಿಂಗಳಾದ ಮೇಲೆ ಬಡ್ಡೀನೂ ಸೇರಿಸಿ ಕೊಡ್ತಾರಂತೆ.

ರಾಘವ ಸಿಗಲಿಲ್ಲ. ಬಟ್ಟೆ ಒಕ್ಕೊಂಡೆ. ಮಧ್ಯಾಹ್ನ ಸುಂದರ ಬಂದಿದ್ದ. ಸಂಜೆ Cubbon Parkಗೆ Walking ಹೋಗಿದ್ದೆವು. 1 ಬ್ಲೇಡ್ ತಂದೆ.

ಹೂವಮ್ಮನ ಮನೇಲಿ 1 ಮನೆ ಇದೆಯಂತೆ. 10 ರೂ. ಬಾಡಿಗೆ.

04 ಮಾರ್ಚ್ 1946

ಬೆಳಿಗ್ಗೆ Shave ಮಾಡಿಕೊಳ್ಳೋಕೆ ಹೋದೆ, ಕಿವಿ ಹೆರ್ಕೊಂಡೆ.

ಕೆಲವು Books Review ಮಾಡಿದೆ.

ಸೀನ ಇನ್ನೂ ಬಂದಿಲ್ಲ. ಸಂಜೆ ರಾಘ್ವ ಸಿಕ್ಕಿದ್ದ, ದೋಸೆ ಕಾಫಿ ಕೊಡಿಸಿದ, Amba Bhavanನಲ್ಲಿ - ಬೆಲ್ಲಾ ಇಲ್ಲೂ! ಮನೇಗೆ ಬರೋ ಹೊತ್ಗೆ ಅಮ್ಮಾ ಬಂದು ಎಲ್ಲೋ ಹೋಗಿದ್ಲು. ನಂಜುಂಡಣ್ಣಂಗೆ Phone ಮಾಡಿದ್ದೆ, ಇರಲಿಲ್ಲ. Type ಚಕ್ಕರ್.

05 ಮಾರ್ಚ್ 1946

ಅಮ್ಮ ಇವತ್ತು ದುಡ್ಡಿನ ಲೆಕ್ಕಾಚಾರ ಮಾಡಿದಳು. 40 ರೂ. ನನ್ನ ಕೈಗೆ ಕೊಟ್ಟಳು. ನನಗೆ ಜೀವ ಬಂದ ಹಾಗಾಯ್ತು. ರಾಘವನ ಮನೆಗೆ ಹೋಗ್ಲಿಲ್ಲ. ಇವತ್ತು ನಂಜುಂಡಣ್ಣಂಗೆ Phone ಮಾಡ್ದೆ, ಇರ್ಲಿಲ್ಲ. Whitefieldಗೆ ಹೋಗಿದಾನಂತೆ. ಬೆಳಿಗ್ಗೆ ಖಲೀಲ್ ಸಿಕ್ಕಿದ್ದ, ಸಂಜೆ ಸೀನ ಸಿಕ್ಕಿದ್ದ.

06 ಮಾರ್ಚ್ 1946

ಅಮ್ಮ ಬೆಳಿಗ್ಗೆ ಊರಿಗೆ ಹೋದಳು. Bus Stop ಹತ್ರ ಅವ್ಳನ್ನ ಕೂಡಿಸಿ ಕಾಫಿ ತೆಗೆದುಕೊಂಡು ಬಂದು ಕೊಟ್ಟೆ. ಆಮೇಲೆ ರಾಘ್ವನ ಮನೆಗೆ ಹೋದೆ. ದುಡ್ಡು ಕೇಳಿದೆ. ಸಂಜೆ Office ಹತ್ರ ಬಾಂದ. ಅಗಸನಿಗೆ ಬಟ್ಟೆ ಹಾಕಿದ್ದಾಯ್ತು. ದುಡ್ಡಿಲ್ದೇ ಕಾಫಿ ಕುಡೀತಿಲ್ಲ.

Food Plan for India ಅನ್ನೋ Article Translate ಮಾಡ್ತಿದೀನಿ.

ಖಲೀಲ್ ಸಿಕ್ಕಿದ್ದ. ಸಂಜೆ ನಂಜುಂಡಣ್ಣನೇ Phone ಮಾಡಿದ. ಇನ್ನೂ Transfer ವಿಚಾರ ಗೊತ್ತಿಲ್ಲ. ನಂಜುಂಡಣ್ಣನ ಮನೇಲಿ ಮಾತಾಡ್ತಾ ಕೂತಿದ್ದೆ. ಆಮೇಲೆ ಗಿರೀ ಜತೇಲಿ ಬಂದೆ ಮಾತಾಡ್ಕೊಂಡು. ಕೃಷ್ಣರಾವ್‍ಗೆ ಕಾರ್ಡು ಬರೆದೆ.

07 ಮಾರ್ಚ್ 1946

ಬೆಳಿಗ್ಗೆ ರಾಘವನ ಮನೆಗೆ ಹೋಗಿದ್ದೆ. ಅವನ್ಹತ್ರ ಮೂರು ರೂ. ಸಾಲ. ಆಫೀಸಿಗೆ ಹೋಗೋವಾಗ ಚಂದ್ರಪ್ಪ ಸಿಕ್ಕಿದ್ದ.

ಯಜಮಾನ್ರ Temple Civilization ಅನ್ನೋ Article Translate ಮಾಡಿದೆ.

ಪಿಳ್ಳೇಗೆ ಕಾರ್ಡು ಬರೆದೆ. ರಾಘೂಗೆ ಪೆರಿಯಾಪಟ್ಟಣಕ್ಕೆ Transfer ಆಗಿದೇಂತ ನಂಜುಂಡಣ್ಣ Phone ಮಾಡಿದ್ದ.

08 ಮಾರ್ಚ್ 1946

ಮನೇಗೆ 15 ರೂ. ಕೊಟ್ಟೆ.

09 ಮಾರ್ಚ್ 1946

ರಾಘ್ಹವ ಬಂದಿದ್ದ ಆಫೀಸ್ ಹತ್ರ. ಅಮ್ಮನಿಂದ ಕಾಗದವೇ ಇಲ್ಲ. ರಾಘೂಗೆ ಇನ್ನೂ ಕಾಗದ ಬರೀಲಿಲ್ಲ.

10 ಮಾರ್ಚ್ 1946

ಬೆಳಗ್ಗೆ ಎಷ್ಟು ಹೊತ್ತು ಕಾದ್ರೂ ಆಚಾರ್ರು ಬರಲಿಲ್ಲ. ಸರಿ, ಹಸುವಿನ ಗಂಜಳ ಹಾಕಿ ಸಾರಿಸಿದ್ದಾಯ್ತು. ಒಂದೊಂದಾಗಿ ಸಾಮಾನು ಸಾಗಿಸಿದ್ದಾಯ್ತು. ಅಮ್ಮನಿಂದ ಕಾಗದ ಬಂತು. ಮುಂದಿನ ಸೋಮವಾರ ಬರ್ತಾಳಂತೆ.

11 ಮಾರ್ಚ್ 1946

ಬೆಳಿಗ್ಗೇ ಏಳೋದು ನಿಧಾನ ಆಯ್ತು.

ಇವತ್ತು ಬ್ರಾಹ್ಮಣ ಸಮ್ಮೇಳನದ Article Translate ಮಾಡಿದೆ. Food Article ಮುಗೀತು.

ಮನೇಗೆ ಬರೋ ಹೊತ್ಗೆ ರಾಘೂ ಬಂದಿದ್ದ. ಅವನ್ ಸಾಮಾನೆಲ್ಲಾ ಹೊಸ ಮನೆಗೆ ಹಾಕಿದ್ದ. ಸಂಜೆ ಸೀನಣ್ಣ ಸಿಕ್ಕಿದ್ದ. ಅಕ್ಕಿಪೇಟೆಗೆ ಹೋಗೂಂದಿದ್ರು. ಹೋಗ್ಲಿಲ್ಲ.

12 ಮಾರ್ಚ್ 1946

ಬೆಳಿಗ್ಗೆ ಅಗಸನ ಮನೆಯಿಂದ ಬಟ್ಟೆ ತಂದೆ. ತಿರುಗಿ ಬಟ್ಟೆ ಹಾಕಿದೆ. ಸಂಜೆ Aluminium ತಟ್ಟೆ ತಂದೆ. 1-11-0 ಬಿತ್ತು. ಮಲಬಾರ್ ಲಾಡ್ಜ್ ನಲ್ಲಿ ದೋಸೆ 0-2-6 ಅಂತೆ. ಇಷ್ಟ ಬರಲಿಲ್ಲ. 0-1-0 ಕೊಟ್ಟು ಜಹಾಂಗೀರ್ ತಿಂದೆ.

13 ಮಾರ್ಚ್ 1946

ಬೆಳಿಗ್ಗೆ ರಾಘೂಗೆ Society ಇಂದ ಸಾಮಾನು ತಂದು ಕೊಟ್ಟೆ. ತಟ್ಟೆ ಬಾಬ್ತು 8 ಆ. ಕೊಟ್ಟ. ಇವತ್ತು Achar ಸಿಕ್ರು. ಮನೇ ನೋಡ್ಕೋತೀನಿ ಅಂದ್ರು.

14 ಮಾರ್ಚ್ 1946

ಮುಖಕ್ಷೌರ ಮಾಡಿಕೊಂಡು ಒಗೆದ ಬಟ್ಟೆ ಹಾಕ್ಕೊಂಡೆ. ಬೆಳಿಗ್ಗೆ ರಾಘ್ವನ್ನ ಹುಡ್ಕೊಂಡು ಹೋದೆ. ಸಿಕ್ಕಲಿಲ್ಲ. ಸಂಜೆ ಬೇಗ ಬಾಂತ ರಾಘೂ ಹೇಳಿದ.

ಇವತ್ತು ಥಕ್ಕರ್ ಬಾಬಾ Statement Translate ಮಾಡಿದೆ. Phone ಪಕ್ಕದಲ್ಲೇ ಕೂತೆ. Narayan ಇವತ್ತೂ ಬಂದಿಲ್ಲ. ಸಂಜೆ ಆದ ತಕ್ಷಣ ಹೊರಟೆ.

City Busನಲ್ಲಿ ಕೂತು ಬಂದೆ. Bus Standನಲ್ಲಿ V.Srinivasa Rao (ಇಂಗ್ಲಿಷ್ ಮೇಷ್ಟ್ರು) ಕಂಡರು. ಮಾತನಾಡಿಸುವ ಧೈರ್ಯ ಆಗಲಿಲ್ಲ. 4 ಕಾರ್ಡು ತೆಗೆದುಕೊಂಡೆ. ಮನೆಗೆ ಬಂದ ಮೇಲೆ ಊಟ ಆಯ್ತು.

6 ಕಾಸು Weighing Machineಗೆ ಹಾಕಿ ಕಳಕೊಂಡೆ. ಹೊಸ ಮನೇಲಿ ಮಲಗಲಿಲ್ಲ.

15 ಮಾರ್ಚ್ 1946

ಬೆಳಿಗ್ಗೆ ಏಳಕ್ಕೇ ಇಷ್ಟವಿಲ್ಲ. Societyಗೆ ಹೋಗಿ ಸಾಮಾನು ತಂದಿದ್ದಾಯ್ತು. ಅಲ್ಲಿಂದ ಊಟ ಮಾಡ್ಕೊಂಡು ಹೋಗಬೇಕಾದ್ರೆ Late ಆಯ್ತು. ಮನೇ ಬಿಟ್ಟಾಗಲೇ 10 3/4 ಗಂ. ಆಫೀಸಿಗೆ ಹೋದಾಗ 11 1/2 ಆಗಿತ್ತು. ಇವತ್ತು ಬಣ್ಣ ಹಾಕುವವರ ಹೆದರಿಕೆ ಬೇರೆ!

ಮಧ್ಯಾಹ್ನ Shamachar ಏನಾದ್ರೂ ನನ್ನ ವಿಚಾರದಲ್ಲಿ ರಾಮಯ್ಯನೋರು ಕರೆದಾಗ ಒಗ್ಗರಣೆ ಹಾಕಿದಾರೇನೋ ತಿಳಿಯೋಣಾಂತ ಪ್ರಯತ್ನ ಪಟ್ಟೆ. ಅಷ್ಟೊತ್ತಿಗೆ ವೆಂಕಟ್ರಾಮ್ & ಶಾಸ್ತ್ರಿ ಜತೇಲಿ ಅವ್ರನ್ನ ಕಾಫೀಗೆ ಎಳ್ಕೊಂಡೋದ್ರು. 1st Disappointment! Pay ಏನಾರೂ ಸಲೀಸಾಗಿ ಬರತ್ತೇನೋಂದ್ರೆ ಅದೂ ಬರೋ ಮಾರ್ಗವೇ ಇಲ್ಲ.

ನನ್ನ Reporter ಆಗಿ ಏಕೆ ಕಳಿಸಬಾರದೆಂದು ಮಾತು ಬಂದಿತ್ತಂತೆ, Prop. ಹತ್ತಿರ! Latest A.P.I. Messages Receive ಮಾಡಿದೆ.

ಕಾದು ಬೇಸರವಾಗಿ ಹೊರಟು ಬಂದೆ. ವಾಸುದೇವರಾವ್ 2 ರೂ. ಸಾಲ ಕೇಳಿದರು. ಅವರಿಗೆ ಈ ವಿಚಾರ ಹೇಳಿದೆ. ಏನು ತಿಳುಕೊಂತಾರೇಂತ, ನಾನೇನು ಮಾಡಲಿ?

Whitefieldನ Mr.Achar ಸಿಕ್ಕು ಕಾಫಿ ಕೊಡಿಸಿದ್ರು. ಸಂಜೆ ರಾಘ್ವ ಸಿಕ್ಕಿದ್ದ. ನಾಳೆ Advance ಏನಾರೂ ಕೇಳಾರೆಂದು 10 ರೂ. ಕೊಟ್ಟಿದೀನಿ ಅಕ್ಕನ ಹತ್ರ.


No comments: