ಕಾಫಿಗೂ ಕಾಸಿಲ್ಲದ ದಿನಗಳು
11ಕ್ಕೆ ಆಫೀಸಿಗೆ ಹೋದೆ. ಇವತ್ತು Ramiah ಕಲ್ಕತ್ತಾಗೆ ಹೋಗ್ತಾರಂತೆ. ಸೀನನಿಗೆ Pay Settle ಆಗಲಿಲ್ವಂತೆ. ರಾಘವ ಸಿಗಲಿಲ್ಲ. ಸಂಜೆ Paper Copy ತಂದೆ. ಶಾಮಾಚಾರ್‌ನ ನೋಡಿದೆ. ಅಶ್ವಥ್ಥಣ್ಣನ ಮನೆಗೆ ಹೋಗಿದ್ದೆ.
[ಅಡಿ ಟಿಪ್ಪಣಿ:- ಸೀನ ಮತ್ತು ರಾಘವ ನಾಗೇಶರಾವ್ ಅವರ ಬೆಂಗಳೂರು ಸ್ನೇಹಿತರು.
‘ತಾಯಿನಾಡು’ ಆಗ ಸಂಜೆ ದಿನಪತ್ರಿಕೆ.
ಅಶ್ವಥ್ಥಣ್ಣ ನಾಗೇಶರಾವ್ ಅವರ ದಾಯಾದಿ ನೆಂಟರು, ಬೆಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಕಾಂಟ್ರ್ಯಾಕ್ಟ್ ಮಾಡುತ್ತಿದ್ದವರು].
06 ಜನವರಿ 1946
ಭಾನುವಾರ. ಬೆಳಿಗ್ಗೆ ಎದ್ದು ಪಿಳ್ಳೇ ಮನೆಗೆ ಹೋದೆ. ಹೇಳಲೋ ಬೇಡವೋ ಎಂದಿದ್ದು ಕೊನೆಗೆ ಮನಸ್ಸು ಗಟ್ಟಿ ಮಾಡಿ 50 ರೂ. ಸಾಲ ಕೇಳಿದೆ. ಅವರಿಗೆಷ್ಟೋ ತಾಪತ್ರಯ! ಈ ಮಧ್ಯೆ Shopkeeper ಬೇರೆ ಅವರ ಜತೇಲಿ ಸರಿಯಾಗಿಲ್ಲವಂತೆ! ಸರಿ ಪೇಚಾಡಿಕೊಂಡು ಮನೆಗೆ ಬಂದೆ. ಕರುವಿಗೆ ಏನೋ ಆಗಿದೆ. ಸಂಜೆ ಆಸ್ಪತ್ರೆಗೆ ಹೋಗಿ ಜಂತುಹುಳದ ಔಷಧಿ ತಂದುಕೊಟ್ಟೆ. ಸಂಜೆ ಕಾಫೀಪುಡಿ ತರಲು ಹೋದಾಗ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ಸೀತಮ್ಮನವರ ಮನೆ ಸಂಪತ್ತು ಇಬ್ಬರೂ ಸಿಕ್ಕಿದ್ದರು. ಗುಂಡ ಬಂದಿದಾನಂತೆ. ಸುಂದರನಿಗೆ ಕಜ್ಜಿಯಂತೆ. Resolution Copies ಕೊಟ್ಟ. ರಾತ್ರೆ ರಂಗಣ್ಣ ಬಂದ.
[ಅಡಿ ಟಿಪ್ಪಣಿ:- ’ತಾಯಿನಾಡು’ ಪತ್ರಿಕೆಗೆ ಆಗ ಭಾನುವಾರ ರಜೆಯಿತ್ತು.
ಪಿಳ್ಳೆ - ಮಿಲಿಟರಿ ಡಿಪೋದಲ್ಲಿ ನಾಗೇಶರಾವ್ ಸಹೋದ್ಯೋಗಿ.
ಶೇಷಾದ್ರಿಪುರದಲ್ಲಿ ಅಕ್ಕನ ಮನೆಯಲ್ಲಿ ನಾಗೇಶರಾವ್ ವಾಸವಿದ್ದರು. ಅಲ್ಲಿ ಕರು ಸಾಕಿದ್ದರು.
ಸಂಘ- ತುಮಕೂರಿನಲ್ಲಿ ನಾಗೇಶರಾವ್ ಸಕ್ರಿಯವಾಗಿ ಭಾಗವಹಿಸ್ತುತ್ತಿದ್ದ ಸನ್ಮಿತ್ರ ಸಂಘ.
ಸಂಪತ್ತು, ಗುಂಡ, ಸುಂದರ - ತುಮಕೂರಿನಲ್ಲಿ ನಾಗೇಶರಾವ್ ಕಾಲೇಜ್ ಮೇಟ್ಸ್.
ರಂಗಣ್ಣ - ನಾಗೇಶರಾವ್ ಅವರ ತಂದೆ, ಹಾಲ್ದೊಡ್ಡೇರಿಯಲ್ಲಿ ಕೃಷಿಕ.]
07 ಜನವರಿ 1946
ರಾಘು ಕಾಗದ ಬರೆದು ಕಳಿಸಿದ್ದಾನೆ, ರಂಗಣ್ಣನ ಕೈಲಿ. 2 ರೂ. ಕಳಿಸಿ ರಂಗಣ್ಣನಿಗೆ shirt ಹೊಲಿಸಿಕೊಡು ಎಂದು ಬರೆದಿದ್ದಾನೆ. ನಾಳೆ ಹೋಗು ಎಂದೆ ರಂಗಣ್ಣನಿಗೆ. ಜಮೀನು ವಿಚಾರ ಬೋಧನೆ ಮಾಡಿದ್ದಾಯ್ತು. ಇಷ್ಟರ ಮೇಲೆ ದೇವರಿದ್ದಾನೆ!
11ಕ್ಕೆ ಆಫೀಸು. Sreenivasan Elect ಆಗಿದ್ದಾರೆ President ಆಗಿ.
‘ಶ್ರೀ’ಯವರು ನಿಧನರಾದರಂತೆ ಮೊನ್ನೆ. ದೊಡ್ಡ ಆಘಾತವಾದಂತಾಯಿತು ಕನ್ನಡನಾಡಿಗೆ.
6 ಗಂತೆ ಆಯಿತು office ಬಿಡುವಾಗ.
ರಾಘವನ್ನ ಹುಡುಕಿಕೊಂಡು Coffee Boardಗೆ ಹೋದೆ. ಸಂಘದವರು Resolution Copies ಕಳಿಸಿದ್ದಾರೆ. ನಾನು ‘ತಾಯಿನಾಡು’ವಿನಲ್ಲಿರುವುದು ಅವನಿಗೆ ತಿಳಿಸಿದೆ. 50 ರೂ. ಸಾಲದ ಪ್ರಸ್ತಾಪ ಎತ್ತಿದೆ.
ಕರು ಹಾಗೇ ಇದೆ. ರಂಗಣ್ಣನಿಗೆ ಕಾರ್ಡು ಕೊಟ್ಟೆ. Typewriting ಚಕ್ಕರ್!
[ಅಡಿ ಟಿಪ್ಪಣಿ:- ಮೈಸೂರು ಜರ್ನಲಿಸ್ಟ್ಸ್ ಅಸೋಸಿಯೇಶನ್‍ಗೆ ಶ್ರೀನಿವಾಸನ್ ಅಧ್ಯಕ್ಷರಾಗುತ್ತಾರೆ.
‘ಶ್ರೀ’ - ಬಿ.ಎಂ.ಶ್ರೀಕಂಠಯ್ಯನವರು]
No comments:
Post a Comment