ಸುದ್ದಿಜೀವಿ

ಸುದ್ದಿಜೀವಿ
ನಾಗೇಶರಾವ್

Wednesday, May 20, 2009

ತಾನುಂಟೋ, ಪೇಪರುಂಟೋ!


- ಸುದ್ದಿಜೀವಿ


ತಮ್ಮನ್ನು ‘ಸುದ್ದಿಜೀವಿ’ ಎಂದು ಕರೆದುಕೊಂಡ ದಿನಪತ್ರಿಕೆಯ ಸುದ್ದಿ ಸಂಪಾದಕರು, ವರದಿಗಾರರು ತಳೆಯುವ ‘ತಾನುಂಟೋ, ಪೇಪರುಂಟೋ’ ಧೋರಣೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಪೇಪರಿನಲ್ಲಿ ಹೆಗ್ಗಳಿಕೆ ವರದಿಗಾರನದೋ, ಇಲ್ಲವೇ ಉಪಸಂಪಾದಕನದೋ ಎಂಬ ಬಗೆಹರಿಸಲಾಗದ ಪ್ರೇಮ-ವಿವಾದವನ್ನು ಅವರು ಸ್ವಾರಸ್ಯಕರವಾಗಿ ಬಿಸಿ ಏರಿಸದೇ ಬಣ್ಣಿಸುತ್ತಾರೆ. ಅನುದಿನ ನಡೆಯುವ ಹೆಚ್ಚುಗಾರಿಕೆಯ ಜಗಳ ಎಡಿಷನ್ ಹೊರ ಬರುವವರೆಗೆ ಅಷ್ಟೇ! - ಎಂಬ ವಿವೇಚನೆ ಅವರದು. ತಾನು ಮಾಡುವ ಕೆಲಸ, ಪರಿಸ್ಥಿತಿಗಳನ್ನು ಗಮನಿಸಿದಾಗ ವರದಿಗಾರ ತಳೆಯುವ ಧೋರಣೆಯನ್ನು ಮನ್ನಿಸಬಹುದು - ಸಂ. - ಬೆಂಗಳೂರು ವರದಿಗಾರರ ಕೂಟದ ಸ್ಮರಣ ಸಂಚಿಕೆ (1971)


ರಿಪೋರ್ಟರಿಂದ ಪೇಪರೋ, ಪೇಪರಿಂದ ರಿಪೋರ್ಟರೋ?!

ಈ ಬೀಜವೃಕ್ಷ ಪ್ರಶ್ನೆಗೆ ರಿಪೋರ್ಟರುಗಳಿಂದ ಏನು ಉತ್ತರ ಬರುತ್ತದೆಂದು ಹೇಳುವುದೇ ಬೇಡ!

ಸುದ್ದಿ ಇಲ್ಲದೆ ಪತ್ರಿಕೆ ಆಗುವುದಿಲ್ಲ; ವರದಿಗಾರರಿಲ್ಲದಿದ್ದರೆ ಸುದ್ದಿ ಒದಗುವುದಿಲ್ಲ - ಏನೂ ಇಲ್ಲದಿದ್ದರೆ ಸ್ವಯಂ ಸೃಷ್ಟಿ ಮಾಡುವ ಕಲೆಯೂ ಅವರಿಗೆ ಲೇಖನಿಗತ. ಯಾವುದೂ ದೊರಕದಿದ್ದಾಗ ‘ಹಳೆಯ ಮದ್ಯವನ್ನೇ ಹೊಸ ಶೀಶೆಯಲ್ಲಿ ಹಾಕಿ’, ‘ಸ್ಕೂಪ್’ನ ರೂಪ ಕೊಟ್ಟು, ವಿಜೃಂಭಿಸುವ ಉತ್ಪಾದಕ ತಂತ್ರವೂ ಅವರಿಗೆ ಸಿದ್ಧಿಸಿರುವುದೇ!!

ಆದರೆ ಸುದ್ದಿ ತರುವವರದು ಹೆಚ್ಚುಗಾರಿಕೆಯೋ, ಅದನ್ನು ಒಪ್ಪಮಾಡಿ, ಅಚ್ಚುಕಟ್ಟುಗೊಳಿಸಿ, ಅಳವಡಿಸಿ ಪೇಪರನ್ನು ಉಣಬಡಿಸುವ ಉಪಸಂಪಾದಕರಗಳದು ಹೆಗ್ಗಳಿಕೆಯೋ ಎಂಬುದೊಂದು ಬಗೆಹರಿಯದ ನಿರಂತರ ವಿವಾದ.

ಪತ್ರಿಕೋದ್ಯಮದ ಪ್ರಾರಂಭದೆಶೆಯಲ್ಲಿ ಪತ್ರಿಕಾ ಕಚೇರಿಗಳಲ್ಲಿದ್ದ ಬೆರಳೆಣಿಕೆಯ ಸಿಬ್ಬಂದಿಯೇ ವರದಿಗಾರರೂ, ಉಪಸಂಪಾದಕರೂ, ಸಂಪಾದಕೀಯ ಬರೆಯುವವರೂ ಸರ್ವಸ್ವವೂ ಆಗಿ ಕೆಲಸ ಮಾಡುತ್ತಿದ್ದ ಕಾಲಕ್ಕೂ, ಇಂದಿಗೂ ಮಹತ್ತರ ವ್ಯತ್ಯಾಸವುಂಟು: ವಾರ್ತೆಯನ್ನರಸಿ ಅಹರ್ನಿಶಿ ನಗರದ ಮೂಲೆಮೂಲೆಗೂ ಧಾವಿಸುವ ವರದಿಗಾರರ ಪಡೆಯೊಂದು; ಕಚೇರಿಯ ನಾಲ್ಕು ಗೋಡೆಗಳ ನಡುವೆ ಅಡಗಿದ ವಿಶ್ವದರ್ಶಕ ಉಪಸಂಪಾದಕ ಮಂಡಲಿಯೊಂದು - ಪ್ರತ್ಯೇಕವಾಗಿ. ಆದರೆ ಪರಸ್ಪರ ಪೂರಕವಾಗಿ, ಕೆಲಸ ಮಾಡುತ್ತಿರುವಾಗ ಈ ಹೆಚ್ಚುಗಾರಿಕೆಯ ಸೂಕ್ಷ್ಮ ಪ್ರಶ್ನೆಯನ್ನು ಬಗೆಹರಿಸುವುದು ಯಾವ ಸುಪ್ರೀಮ್ ಕೋರ್ಟಿಗೂ, ಪತ್ರಿಕಾ ಮಂಡಲಿಗೂ ಸಾಧ್ಯವಿಲ್ಲವೆಂದು ಕಾಣುತ್ತದೆ!

ಸಿದ್ಧ-ಅಸಿದ್ಧ-ಪ್ರಸಿದ್ಧ, ರಹಸ್ಯ-ಬಹಿರಂಗ, ನಿರೀಕ್ಷಿತ-ಅನಿರೀಕ್ಷಿತ, ವ್ಯವಸ್ಥಿತ-ಹಠಾತ್, ಗಂಡಾಂತರಕಾರಿ ಇಲ್ಲವೇ ಸುಲಭ-ಲಭ್ಯ, ಹೀಗೆ ನಾನಾ ರೀತಿಯ ಘಟನಾವಳಿಗಳ ಸುದ್ದಿಗಳನ್ನು ವರದಿಗಾರರು ತರುವುದೊಂದು ಸುರಮ್ಯ ಸಾಹಸವಾದರೆ, ಈ ಸುದ್ದಿ ಸಾಹಿತ್ಯವನ್ನೆಲ್ಲಾ ಕೇರಿ-ತೂರಿ, ಕಸಕಡ್ಡಿಗಳನ್ನು ವಿಸರ್ಜಿಸಿ, ಹದಗೊಳಿಸಿ, ಪ್ರಪಂಚ ವಾರ್ತೆಗಳನ್ನು ಸಮಗ್ರ ಪರಿಕರಗಳೊಡನೆ ಸೇರಿಸಿ ಹಿತಮಿತವಾದ ಚೊಕ್ಕ ಪತ್ರಿಕಾ ಭೋಜನ ನೀಡುವುದು ಉಪಸಂಪಾದಕ ಪರಿವಾರದ ನಿತ್ಯದ ಕಸರತ್ತೇ ಸರಿ.

ತಾವು ತಂದ ಸುದ್ದಿಯೆಲ್ಲಾ ಮುಖ್ಯ; ಅದರಲ್ಲಿ ಬರೆದ ವಿವರವೆಲ್ಲಾ ಅವಶ್ಯ; ಒಂದು ಪದವನ್ನೂ ಅಳಿಸದೆ ಹಾಗೆಯೇ ಅಚ್ಚಿಗೆ ಕೊಡಬೇಕೆಂಬ ಅಗ್ಗಳಿಕೆಗಾರರೂ ನಮ್ಮ ವರದಿಗಾರರಲ್ಲುಂಟು. ಸಣ್ಣ ಕಳವಿನಿಂದ ಹಿಡಿದು ಭಾರೀ ಕೊಲೆಯವರೆಗೆ, ಪುರಸಭೆ-ಕಾರ್ಪೊರೇಷನ್ನುಗಳ ಸಾಮಾನ್ಯ ಸಭೆಯಿಂದ ವಿಧಾನಮಂಡಲ ವಿಶೇಷ ವರದಿಯವರೆಗೆ, ಸಣ್ಣ ಪುಟ್ಟ ವರ್ಗಾವರ್ಗಿಯಿಂದ ಹಿಡಿದು ಸರ್ಕಾರವನ್ನೇ ಪಲ್ಲಟಗೊಳಿಸುವ ವಿದ್ಯಮಾನಗಳವರೆಗೆ, ಶ್ರೀರಾಮೋತ್ಸವದ ಪತ್ರಿಕಾ ಗೋಷ್ಟಿಯಿಂದ ಹಿಡಿದು ರಾಷ್ಟ್ರ ವರಿಷ್ಟರ ಸಂದರ್ಶನದವರೆಗೆ, ವಿದ್ಯಾರ್ಥಿ ಸಂಘದ ಮಾಮೂಲು ಆಯ್ಕೆಯಿಂದ ಸಾರ್ವತ್ರಿಕ ಚುನಾವಣೆಯವರೆಗೆ ತಾವು ಬರೆದ ವಿವಿಧ ದರ್ಜೆಯ ವರದಿಗಳನ್ನೆಲ್ಲಾ ಸಮಗ್ರವಾಗಿಯೇ ಪ್ರಕಟವಾಗಬೇಕೆಂಬ ಹಟಗಾರರೂ ಉಂಟು. ಇವುಗಳಲ್ಲಿ ಪ್ರತಿಯೊಂದೂ ಪ್ರಥಮ ಪುಟದಲ್ಲೇ ಪ್ರಕಟಾವಾಗಬೇಕೆಂದು ಆಗ್ರಹಿಸುವ ಛಲವಾದಿಗಳೂ ಇದ್ದಾರೆ! (ಇಂತಹ ವರದಿಗಳನ್ನೆಲ್ಲಾ ಪ್ರಕಟಿಸಲು, ಪತ್ರಿಕೆ ದಿನಕ್ಕೆ ಹತ್ತಾದರೂ ’ಪ್ರಥಮ ಪುಟ’ಗಳನ್ನು ಹೊಂದಿರಬೇಕಾಗುತ್ತದೋ ಏನೋ ಎನಿಸುತ್ತದೆ!)

ಪುಟ ಸಾರ್ವಭೌಮರು

ಇನ್ನು ಇಲಿ ಹೋದರೆ ಹುಲಿ ಹೋಯಿತೆಂಬಂತೆ, ವಿರೋಧ ಪಕ್ಷದವರು ಕೆಮ್ಮಿದರೆ ಮಂತ್ರಿ ಮಂಡಲವೇ ಉರುಳಿಬಿದ್ದಿತೆಂಬಂತೆ, ಪ್ಯಾರಾದಲ್ಲಿ ಮುಗಿಸಬಹುದಾದ ಸುದ್ದಿಯನ್ನು ಕಾಲಮುಗಳನ್ನೇ ಆಕ್ರಮಿಸುವಂತೆ, ಜಾಗ ಭರ್ತಿಯ ತುಣುಕಾಗಬಹುದಾದದ್ದನ್ನು ಮೂರಂಕಣದ ಮಹಾವಾರ್ತೆಯಾಗುವಂತೆ ಲಂಬಿಸುವ ಪ್ರತ್ಯುತ್ಪನ್ನಮತಿಗಳೂ ಇದ್ದಾರೆ; ಈ ಪುಟ ಸಾರ್ವಭೌಮರ ಉತ್ಪಾದನೆಯನ್ನು ಅವರು ಬಯಸುವ ರೀತಿಯಲ್ಲೇ ಇಡಿಯಾಗಿ ಅಳವಡಿಸಿದರೆ ಕನ್ನಡ ಪತ್ರಿಕೆಗಳು ಸುಲಭವಾಗಿ ’ನ್ಯೂಯಾರ್ಕ್ ಟೈಮ್ಸ್’ ಆಗಬಹುದು - ಪುಟ ಸಂಖ್ಯೆಯಲ್ಲಿ! (ಮ್ಯಾನೇಜರ್ ಮಹಾಶಯರು ಧಾರಾಳವಾಗಿ ನ್ಯೂಸ್ ಪ್ರಿಂಟನ್ನೂ, ಕಂಪೋಸಿಂಗ್ ಸಿಬ್ಬಂದಿಯನ್ನೂ ಒದಗಿಸುವುದಾದರೆ! - [ಇದು ಹೆಚ್ಚೂ ಕಮ್ಮಿ ನಾಲ್ಕು ದಶಕಗಳ ಹಿಂದಿನ ಪರಿಸ್ಥಿತಿ. ಧಾರಾಳವಾಗಿ ನ್ಯೂಸ್ ಪ್ರಿಂಟ್ ಸಿಗುವ, ಪ್ರತ್ಯೇಕ ಕಂಪೋಸಿಂಗ್ ಸಿಬ್ಬಂದಿಯ ಅಗತ್ಯವೂ ಇಲ್ಲದ ಇಂದಿನ ದಿನಗಳಲ್ಲಿ ಮ್ಯಾನೇಜರ್ ಮಹಾಶಯರ ಮರ್ಜಿ ಹಿಡಿಯಬೇಕಿಲ್ಲವೇನೊ? - ಸಂ.]

ವರದಿಗಾರರ ಸುದ್ದಿಗಳ ಉದ್ದ-ಗಾತ್ರಗಳ ಹೊಡೆತವನ್ನು ಹೇಗಾದರೂ ತಡೆದು ಸುಧಾರಿಸಬಹುದು; ಅವರ ಲಿಪಿಯ ಕಿರಿಕಿರಿಯನ್ನು ಸಹಿಸಿಕೊಳ್ಳುವುದು ಮಾತ್ರ ಕಷ್ಟವೆಂದು (ಕನ್ನಡ ಪತ್ರಿಕೆಗಳಲ್ಲಿ) ಉಪಸಂಪಾದಕರೂ, ಕಂಪೋಸಿಟರುಗಳೂ ದೂರುವುದುಂಟು. ‘ವೈದ್ಯ ಲಿಪಿ - ಬ್ರಹ್ಮ ಲಿಪಿ’ ಎಂಬ ಗಾದೆಯ ಬದಲು, ‘ರಿಪೋರ್ಟರ್ ಲಿಪಿ’ಯನ್ನೇ ಆ ಗೀಚು ಗೌರವಕ್ಕೆ ಏರಿಸುವುದು ಅತ್ಯಗತ್ಯವೆಂದು ನನ್ನ ಭಾವನೆ. ಮುದ್ದಾಗಿ, ಗುಂಡಾಗಿ, ಸ್ಫುಟವಾಗಿ ಬರೆಯುವ ವರದಿಗಾರರ್ಯಾರಾದರೂ ಅಪ್ಪಿ ತಪ್ಪಿ ಇದ್ದರೆ (ಕೆಲವರು ಇದ್ದಾರೆ, ಎನ್ನಿ!) ಅವರಿಗೆ ಸ್ವರ್ಣಾಕ್ಷರ ಪ್ರಶಸ್ತಿಯಿತ್ತು ಸನ್ಮಾನಿಸಬೇಕು ಇಲ್ಲವೇ ರಿಪೋರ್ಟರ್ ಹುದ್ದೆಯಿಂದ ಬರ್ತರ್ಫ್ ಮಾಡಬೇಕು!

ಅಂತೂ ಕನ್ನಡ ಲಿಪಿ ಸುಧಾರಣೆಯಾಗಬೇಕೆಂದು ವಾದಿಸುವವರು, ಬಹುತೇಕ ವರದಿಗಾರರ ಕಾಕಲಿಪಿ - ಬ್ರಹ್ಮಲಿಪಿಗಳನ್ನು ನೋಡಿದ ಮೇಲೆ, ನಮ್ಮ ಲಿಪಿ ಸುಧಾರಣೆ ಆನಾಯಾಸವಾಗಿ ನಡೆದಿದೆಯೆಂದು ಹೆಮ್ಮೆಯ ನಿಟ್ಟುಸಿರು ಬಿಡಬಹುದು! ಕೆಲವು ವರದಿಗಾರರ ಇಂತಹ ಹಸ್ತಪ್ರತಿಯನ್ನು ತೋರಿಸಿ, ವಿಶೇಷ ಪರ್ಮಿಟ್‍ನ ವಸ್ತುಗಳನ್ನು ಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿತ್ತ ರಹಸ್ಯ ಸೂಚನೆಯೆಂಬಂತೆ ಉಪಯೋಗಿಸುವುದೂ ಸಾಧ್ಯವೆಂದು ಅನುಭವಿಗಳೊಬ್ಬರು ಹೇಳುತ್ತಾರೆ! ನಾನಾ ವರದಿಗಾರರು ವಿವಿಧ ವೇಗ-ಉನ್ಮಾದಗಳಲ್ಲಿ ಬರೆದ ಲಿಪಿಯನ್ನು ಅರ್ಥ ಮಾಡಿಕೊಂಡು ಅಚ್ಚಿಸಿದ ಉಪಸಂಪಾದಕರೂ-ಕಂಪೋಸಿಟರುಗಳೂ ಹಳೆಯ ಕನ್ನಡ ಶಿಲಾಶಾಸನಗಳನ್ನು ಸುಲಭವಾಗಿ ಓದಿ ಅರ್ಥ ಬಿಡಿಸಬಹುದೆಂದು ಪ್ರಾಚ್ಯ ಸಂಶೋಧಕರೊಬ್ಬರ ಸಲಹೆ!!

ಸ್ವರೂಪ ದರ್ಶನ

ಬರೆಯುವುದರಲ್ಲಿ ಬುದ್ಧಿವಂತಿಕೆಯಿಲ್ಲದಿದ್ದರೂ, ಬಡಾಯಿಯಲ್ಲಿ ಸಂದರ್ಶಕರನ್ನು ಬೆಪ್ಪು ಹಿಡಿಸುವಂತಹವರು; ವರದಿಯ ಶೈಲಿ-ಹೂರಣಗಳಲ್ಲಿ ಸತ್ತ್ವವಿಲ್ಲದಿದ್ದರೂ ಉಡುಪಿನ ಆಡಂಬರ-ಠೀವಿ-ಗತ್ತುಗಳಿಂದ ಇತರರನ್ನು ಮರುಳು ಮಾಡಬಲ್ಲವರು; ನೋಡಲು ವಕ್ರರಂತೆ, ಒರಟರಂತೆ, ಪೆದ್ದರಂತೆ ಕಂಡರೂ, ತಮ್ಮ ಚಾಣಕ್ಷತನ, ತಿಳಿವಳಿಕೆ, ಸುದ್ದಿಗ್ರಹಣ ಬುದ್ಧಿಗಳಿಂದ ಎಂತಹ ದುಸ್ಸಾಧ್ಯ ಮೂಲದಿಂದಲೂ ವಾರ್ತೆಯನ್ನೆಬ್ಬಿಸಿ ತರುವವರು - ಹೀಗೆ ವರದಿಗಾರರಲ್ಲೂ ಬಗೆಬಗೆಯ ಸ್ವಭಾವದವರುಂಟು (ಉಪಸಂಪಾದಕ ವರ್ಗವೂ ಇದಕ್ಕೆ ಹೊರತಿಲ್ಲವೆನ್ನಿ). ಮತ್ತೆ ಕೆಲವರು ವರದಿಗಾರರಿದ್ದಾರೆ. ಅವರೇ ‘ಅರಿಭಯಂಕರ’ರು. ವಾರ್ತಾ ಸಂದರ್ಶನಗಳಲ್ಲಿ ಅವರು ಹಾಕುವ ಪಾತಾಳಗರಡಿ ಪ್ರಶ್ನೆಗಳಿಂದ, ತತ್ತರಿಸುವಂತೆ ಮಾಡುವ ಪಾಟೀಸವಾಲಿನಿಂದ ಉತ್ತರಿಸುವಂತೆ ಬಲಾತ್ಕರಿಸುವ, ಬೆರಳ ಮೇಲಿನ ಅಂಕೆ-ಅಂಶಗಳಿಂದ ಸಂದರ್ಶಕರು ತಾವು ಯಾವ ಸಂಗತಿಗಳನ್ನು ಮುಚ್ಚಿಡಬೇಕೆಂಬ ಉದ್ದೇಶದಿಂದ ಈ ವಾರ್ತಾಗೋಷ್ಟಿ ಕರೆದಿದ್ದರೋ ಆ ಆಶಯವೇ ಭಗ್ನವಾಗಿ ತಮಗೆ ಅಹಿತವಾದ ವಸ್ತು ಸ್ಥಿತಿಯನ್ನು ತಾವಾಗಿ ಅವರು ಒದರಿ ಬಿಡುವಂತೆ ಮಾಡಿಬಿಡುತ್ತಾರೆ!

"ಶಿಸ್ತಿನ ಪುಟ್ಟಸ್ವಾಮಿಗಳು"

ಕೆಲವು ವರದಿಗಾರರಂತೂ ತಮ್ಮ ಮಾತಿನ ಮೋಡಿಯಿಂದ, ನಯಗಾರಿಕೆಯಿಂದ ಎಂತಹ ಕಲ್ಲನ್ನೂ ಮಾತನಾಡಿಸಿ ಸುದ್ದಿಯನ್ನು ಭೇದಿಸಿಬಿಡುತ್ತಾರೆ. ಹಲವಾರು ಮಂದಿಯಾದರೋ ವರದಿಗಾರ ವೃಂದಕ್ಕೇ ಕೇವಲ ‘ಭೂಷಣ’; ನೋಡುವುದಕ್ಕೆ ‘ಶಿಸ್ತಿನ ಪುಟ್ಟಸ್ವಾಮಿ’ಗಳು - ಅವರ ಅಲಂಕಾರವೊಂದೇ ಸಭೆ-ಗೋಷ್ಟಿಗಳಿಗೆ ನೀಡುವ ಕಳೆ; ಟೀ-ಪಾರ್ಟಿಗಳನ್ನು ಭರ್ತಿ ಮಾಡುವುದಕ್ಕಾಗಿಯೇ ಬರುವುದು ಅವರ ‘ಜೀವನ ಯಾತ್ರೆ’!

ಬೆಳಿಗ್ಗೆ ಒಂಬತ್ತು ಗಂಟೆಗೆ ನಡೆದ ಘಟನೆ, ಭೇಟಿ ಅಥವಾ ಕಾರ್ಯಕಲಾಪದ ವರದಿಯನ್ನು ರಾತ್ರಿ ಒಂಬತ್ತು ಗಂಟೆಗೆ (ಹೇಗಿದ್ದರೂ ಮಾರನೆಯ ಬೆಳಿಗ್ಗೆಯ ಪತ್ರಿಕೆಯಲ್ಲಿ ತಾನೇ ಬರುವುದು!) ಕೊಡುವ ‘ಎಮ್ಮೆಯ ಮೇಲೆ ಮಳೆಗರೆದಂತಹ’ ನಿಶ್ಚಿಂತ ಸ್ವಭಾವದವರೂ ಇದ್ದಾರೆ; ಆದುದನ್ನು ಆಗಿಂದಾಗಲೇ ಅಲ್ಲಿಂದಲೇ ಫೋನಿನಲ್ಲಿ ತುರುಕಿ ಕಿರುಕುಳಗೊಳಿಸುವ ಆತುರಗಾರರೂ ಇದ್ದಾರೆ. ಹೀಗೆ ಅವಸರ ಪಟ್ಟು ಪೊಲೀಸು ವರ್ತಮಾನಗಳೂ, ಕೋರ್ಟು ಸುದ್ದಿಗಳೂ (ಇನ್ನೊಮ್ಮೆ ತಾಳೆಮಾಡಿ ನೋಡುವ ವ್ಯವಧಾನವನ್ನೂ ತಳೆಯದೆ) ಅಚ್ಚಿಗೆ ಧಾವಿಸುವಂತೆ ಮಾಡಿ, ಆನಂತರ ಕಚೇರಿಯನ್ನೂ ಪೇಚಿಗೆ ಸಿಲುಕಿಸಿ, ತಾವೂ ತೊಂದರೆಗೆ ಗುರಿಯಾಗುವವರೂ ಉಂಟು.

ಅಹಂ ಬ್ರಹ್ಮಾಸ್ಮಿ!

’ನಾನೇ ಎಲ್ಲಾ ಸುದ್ದಿಗಳನ್ನೂ ಕೊಡುವವನು! ನನ್ನಿಂದಲೇ ಪತ್ರಿಕೆ’ ಎಂಬಂತಹ ಭ್ರಮೆಯನ್ನು ಹೊಂದಿ, ಸಾರ್ವಜನಿಕರಲ್ಲಿ ಮೆರೆಯುವವರೂ ಉಂಟು. ಅವರು ಕೊಟ್ಟ ವರದಿಗಳು ಅಚ್ಚಿನಿಂದ ಹೊರಬರುವ ವೇಳೆಗೆ ಎಷ್ಟೊಂದು ಕಟಾವು, ಮಾರ್ಪಾಟು, ಸಂಕ್ಷೇಪಗಳಿಗೆ ಒಳಗಾಗಿರುತ್ತವೆ. ಬಂದರೂ, ಒಟ್ಟು ಪತ್ರಿಕೆಯ ವಿಸ್ತಾರದಲ್ಲಿ ಅವೆಷ್ಟು ಕಡಿಮೆ ಸ್ಥಾನ ಆಕ್ರಮಿಸಿರುತ್ತವೆಂಬುದೂ ಕಂಪೋಸಿಟರಿಗೇ ಗೊತ್ತು! ಕೆಲವರ ಈ ಮಿತಿಮೀರಿದ ಪ್ರದರ್ಶನದಿಂದ, ಹಲವು ಮಹನೀಯರು ಸುದ್ದಿಯನ್ನು ಕೊಡದೇ ಹೋಗಿ, ತಕ್ಷಣ ಪ್ರಚಾರದ ಅವಕಾಶ ಕಳೆದುಕೊಳ್ಳುವುದೂ ಉಂಟು.

ಕೆಲವು ಸ್ಫೋಟಕ ಸನ್ನಿವೇಶಗಳಲ್ಲಿ, ಪತ್ರಿಕೆಗಳು ತಳೆಯುವ ಧೋರಣೆಗಳನ್ವಯ ಅಂತಹ ವಿದ್ಯಮಾನಗಳ ವರದಿಗಳ ಸ್ವರೂಪ-ವಿನ್ಯಾಸ-ಪ್ರಾಮುಖ್ಯ-ಶಿರೋನಾಮಗಳಲ್ಲಿ ತಿರುವು ಉಂಟಾಗುವುದರಿಂದ, ಸಂಬಂಧಪಟ್ಟ ವರದಿಗಾರರು ಎಷ್ಟೋ ವೇಳೆ ಜನನಿಂದನೆ-ಟೀಕೆ-ಭರ್ತ್ಯನೆ-ದೈಹಿಕ ಪೆಟ್ಟು-ವೈಯಕ್ತಿಕ ನಷ್ಟಗಳಿಗೂ ಗುರಿಯಾಗುವುದುಂಟು. ವಿದ್ಯಾರ್ಥಿ ಗಲಭೆ, ಕಾರ್ಮಿಕ ಮುಷ್ಕರ, ಕೋಮುವಾರು ಘರ್ಷಣೆ, ಭಾಷಾ ಜಗಳ, ರಾಜಕೀಯ ಪಕ್ಷಗಳ ತಿಕ್ಕಾಟ - ಮತ ಪ್ರದರ್ಶನ, ಪೊಲೀಸರ ಲಾಠಿ ಪ್ರಹಾರ-ಗೋಲೀಬಾರ್, ಕಾರ್ಪೊರೇಷನ್-ಶಾಸನ ಸಭೆಗಳಲ್ಲಿನ ಚಕಮಕಿ ಮುಂತಾದ ಪ್ರಸಂಗಗಳ ಸುದ್ದಿಗಳನ್ನು ಉಭಯ ಪಕ್ಷಗಳಿಗೂ ತೃಪ್ತಿಯಾಗುವಂತೆ ಪ್ರಕಟಿಸುವುದು ಎಂತಹ ನಿಷ್ಪಕ್ಷಪಾತಿ ಪತ್ರಿಕೆಗೂ ಅಸಾಧ್ಯ. ಇಂತಹ ಸಂದರ್ಭಗಳಲ್ಲಿ ಅವುಗಳ ವರದಿಗಾರರಿಗೆ ಅಪಖ್ಯಾತಿ - ಎಷ್ಟೋ ವೇಳೆ ಅಪಾಯವೂ - ಕಟ್ಟಿಟ್ಟ ಬುತ್ತಿ.

ಜಂಬವಿರಲಿ

ಏನೇ ಆಗಲಿ, ವರದಿಗಾರರದು ಕಷ್ಟ ಸಹಿಷ್ಣು ಜೀವನ - ಕಮಲ ಪತ್ರದಂತೆ ಅವರು ಟೀಕೆ-ಹೊಗಳಿಕೆಗಳಿಗೆ ಸಗ್ಗದೆ ನಿರ್ಲಿಪ್ತರಾಗಿ ಕರ್ತ್ಯವ್ಯ ನಿರ್ವಹಿಸುತ್ತಾ ಹೋಗುವವರೆಗೂ ಚಿಂತೆಯಿಲ್ಲ. ಮುಂಜಾವಿಂದ ಮುಂಜಾವಿನವರೆಗೆ ಯಾವುದೇ ಸಮಯ-ಸನ್ನಿವೇಶದಲ್ಲೂ ಕೆಲಸ ನಿರ್ವಹಿಸಲು ಸಿದ್ಧರಾದ, ಸರ್ವತ್ರಸನ್ನದ್ಧರಾದ ಸುದ್ದಿ ಸೈನಿಕರಿವರು; ಸರ್ವಾಂತರ್ಯಾಮಿಗಳು; ಸರ್ವ ವಿಷಯ ಪಾರಂಗತೆಯನ್ನು ಪ್ರಕಟಿಸಬೇಕಾದವರು. ಲೇಖನಿಯೇ ಇವರ ಶಸ್ತ್ರಾಸ್ತ್ರ - ಟಿಪ್ಪಣಿ ಪುಸ್ತಕವೇ ಅವರ ಗುರಾಣಿ - ಸರ್ವದಾ ಧೈರ್ಯದ ನಗೆಮೊಗವೇ ಅವರ ಮೈಗಾವಲು.

ಅಣುಬಾಂಬು ಕಂಡು ಹಿಡಿದಿರುವ ಈ ವಿನಾಶಕ ಯುಗದಲ್ಲೂ, ಚಂದ್ರನತ್ತ ಹಾರಿರುವ ಬಾಹ್ಯಾಂತರಿಕ್ಷ ಯಾತ್ರೆಯ ಈ ಶಕೆಯಲ್ಲೂ ವರದಿಗಾರರ ಲೆಕ್ಕಣಿಕೆಯೇ ಮಾನವನ ಗುರಿ-ಗಂಡಾಂತರಗಳನ್ನರಹುವ, ಎಚ್ಚರಿಸುವ ಸಾಧನವಾಗಿ ಇನ್ನೂ ಉಳಿದಿರುವುದು ನಾಗರಿಕತೆಯ ಪುಣ್ಯ. ರಿಪೋರ್ಟರುಗಳ ಚಿಕಿತ್ಸಕ ಬುದ್ಧಿ, ಅನ್ವೇಷಕ ಸಾಹಸ, ಜನಸೇವೋತ್ಸಾಹ, ಅನ್ಯಾಯಗಳನ್ನು ಬಯಲಿಗೆಳೆಯುವ ಛಲ, ಇವೇ ಸಮಾಜಕ್ಕಿರುವ ಶ್ರೀರಕ್ಷೆ.

ಈ ವಿಶಾಲ ದೃಷ್ಟಿಯಿಂದ ನೋಡಿದಾಗ ರಿಪೋರ್ಟರು ‘ತಾನುಂಟೋ, ಪತ್ರಿಕೆಯುಂಟೋ’, ‘ತಾನುಂಟೋ, ಮೂರು ಲೋಕವುಂಟೋ’ ಎಂದು ಜಂಬದಿಂದ ಮೆರೆದರೆ ಮತ್ಸರಪಡಬೇಕಿಲ್ಲ. ಆದ್ದರಿಂದಲೇ ಸಂಪಾದಕೀಯ ಕೋಣೆಗಳಲ್ಲಿ ಅನುದಿನ ನಡೆಯುವ ರಿಪೋರ್ಟರ್-ಸಬ್ ಎಡಿಟರ್ ಹೆಚ್ಚುಗಾರಿಕೆಯ ಜಗಳ ಎಡಿಷನ್ ಹೊರಬರುವವರೆಗೆ, ಅಷ್ಟೇ!
---


No comments: