ಸುದ್ದಿಜೀವಿ

ಸುದ್ದಿಜೀವಿ
ನಾಗೇಶರಾವ್

Sunday, May 24, 2009

ನಮ್ಮಲ್ಲಿನ ಹವೆ - ಹೇಳಿ ಪ್ರಯೋಜನವಿಲ್ಲ ಮಾರಾಯ್ರೆ - ಪ್ರಿಕ್ಲಿ ಹೀಟು!

[ದಿನಾಂಕ 29/4/60ರಂದು ಹೆಚ್.ಆರ್.ನಾಗೇಶರಾವ್ ಅವರು ಸ್ವೀಕರಿಸಿದ ಈ ಪಗೋ ಪತ್ರದಲ್ಲಿ ಮಂಗಳೂರಿನ ಪ್ರಿಕ್ಲಿ ಹೀಟು - ಬೆಂಗಳೂರಿನ ಥಂಡಿ ಹವಾ, ಎರಡೂ ಕಡೆಯ ಪತ್ರಿಕೋದ್ಯೋಗಿಗಳ ಅಗ್ದಿ ಭಯಂಕರ ಸ್ಥಿತಿ, ಭವಿಷ್ಯತ್ತಿನ ಬಗ್ಗೆ ಚಿಂತನೆ .. ಹೀಗೆ ನಾಲ್ಕು ದಶಕಗಳ ಹಿಂದಿನ journo daysಗೆ ನಿಮ್ಮನ್ನು ಕರೆದೊಯ್ಯುತ್ತದೆ.]

ಮಂಗಳೂರು 26/4/60

ಗೆ ನಾಗೇಶರಾಯರಿಗೇ

ಗೆ ಪಗೋರಿಗೆಯ ನಮಸ್ತೆ - ಉರ್ಫ್ ವಂದನೆಗಳು.

ಹಲವಾರು ಯೋಜನೆಗಳು ವಿಫಲವಾದ ನಂತರ ಬಂದ ನಿಮ್ಮ ಪತ್ರಕ್ಕೆ ಈ ತಿಂಗಳು ಮುಗಿಯುವ ಮೊದಲೇ ಉತ್ತರ ಬರೆಯಬೇಕು - ಅದೂ ಈ ದಿನದ ಕಾರ್ಯಕ್ರಮದಲ್ಲೆ ಮುಗಿಯಬೇಕೆಂಬ ದೃಢ ನಿರ್ಧಾರ ಮಾಡಿ ಆರಂಭಿಸಿದ್ದೇನೆ: ರಾತ್ರಿ ೧೦:೩೦ರ ಹೊತ್ತಿಗೆ. ಮನೆ ಸಮೀಪವಾದುದರಿಂದ ಅನುಕೂಲ (+ ಅನನುಕೂಲ) ಇರುವ ಕಾರಣ ತಿರುಗಿ ಕಾರ್ಯಾಲಯಕ್ಕೇ ಬಂದು ಬರೆಯುವ ಮನ ಮಾಡಿದ್ದೇನೆ. ಸರಾಗವಾಗಿ ಬರೆಯಲು ink flow ಸರಿಯಾಗಿರುವ ಒಂದು Parker pen ಕೂಡಾ borrow ಮಾಡಿದ್ದೇನೆ (ಆದರಿಂದಾಗಿಯೇ ಮಸಿ ಹಸಿರಾಗೋಕ್‍ಹತ್ತಿದೆ!) ಆದುದರಿಂದ - ಆಗಾಗ ಸಹ+ನಿರುದ್ಯೋಗಿಗಳು ಬಂದು ತೊಂದರೆ ಕೊಡುತ್ತಿದ್ದರೂ ಮುಂದುವರಿಸುವ ಪ್ರಯತ್ನ ಸಾಗಿದೆ.

ದಿನ ಪಾಳಿಯಾದರೂ ರಾತ್ರಿ ಬಂದು ಬರೆಯಲು ತಕ್ಕ ಸ್ವಾತಂತ್ರ್ಯ ಸಿಕ್ಕಿದೆ. ಕುಮಾರ ಕಂಠೀರವನನ್ನೂ, ಅವನಮ್ಮನನ್ನೂ ಒಟ್ಟಾಗಿ ಬೆಂಗಳೂರಿಗೆ ‘ಥಂಡಿ’ ಹವಾ ತಿನ್ನಲು - 2 ತಿಂಗಳ ಕಾಲ ರಜಾ ಕೊಟ್ಟು ಕಳುಹಿಸಿದ್ದೇನೆ. ಆದುದರಿಂದ ಮನೆಗೀಗ ನಾನೇ ಸರ್ವಾಧಿಕಾರಿ. ಬೀಗ ಜಡಿದು ಬಂದಿರುವ ಕಾರಣ ಎಷ್ಟು ಹೊತ್ತು ಬೇಕಾದರೂ ಬರೆಯಬಹುದು - ಬರೆದು ಮುಗಿಸಬಹುದು.

ಆದ್ದರಿಂದ ಉಭಯ ಕುಶಲೋಪರಿ ಸಾಂಪ್ರತ -

ನಿಮ್ಮ ಪ್ರತಿಯೊಂದು ಪತ್ರದಲ್ಲೂ ಒಂದೊಂದು Bomb, shell ಮಾಡುತ್ತೀರಿ - ನಿಮಗಾದರೂ ಹೇಗೆ ಸಿಗುತ್ತದೆ ಅಂತಹ ಸುದ್ದಿ ಎಂದು ಆಶ್ಚರ್ಯ ಪಡುವ ಹಾಗೆ. ನಮ್ಮದೇನೂ ಇಲ್ಲ ... ಇದ್ದರೂ ಅದೇ double D (Dull & Drab) ಎನ್ನುವ ಹಾಗಿದೆ.

ನಿಮ್ಮಲ್ಲಾದ ಅಗ್ದಿ ಬದಲಾವಣೆ (ಸ್ವಲ್ಪ ಮಟ್ಟಿಗಾದರೂ) ಕಂಡು ಬಂದಿದೆ. ತಪ್ಪುಗಳ ವಿಚಾರ ಮಾತ್ರ ನಾನು ಗಮನಿಸಹೋಗಿಲ್ಲ - ಏಕೆಂದರೆ ನಾವೂ ತಪ್ಪುಗಳಲ್ಲಿ ಕಡಿಮೆಯೇನೂ ಅಲ್ಲ (ಬೆನ್ನು ತಟ್ಟಿಕೊಳ್ಳಲೆ!) ಅಂದರೆ, ಆದ ಕಲಹ ಮತ್ತು ಕೊನೆಯ truce‍ನ ವಿಚಾರ ಮಾತ್ರ ಒಂದಷ್ಟು ಯೋಚನೆ ತರುವಂತಹದು. ‘ವಿಕೋಪಕ್ಕೆ ತಿರುಗದಂತೆ’ ಆಗಲಿ ಎಂದಷ್ಟು ಮಾತ್ರ ಹಾರೈಸುತ್ತೇನೆ.

ನಿಮ್ಮ ಕಾರ್ಯಾಲಯದಲ್ಲಾದ ಆಸನವ್ಯವಸ್ಥೆ ಬದಲಾವಣೆ ಗಮನಾರ್ಹ. ನಮ್ಮಲ್ಲಿ ಆ ರೀತಿಯ ಚಿತ್ರ ಬಿಡಿಸಬೇಕೆಂದರೆ ಹೆಚ್ಚಿನ ಕೆಲಸವೇನೂ ಇಲ್ಲ. ಅತಿ ಸುಲಭ. Administration & Ads ಒಂದು ಫರ್ಲಾಂಗ್ ದೂರ. ಕಟ್ಟಡ, ನಿವೇಶನ ಎಲ್ಲವೂ ಬೇರೆ. ಸಂಪರ್ಕಕ್ಕೆ ITIಯವರ PAX (25 Lines) ಮಾತ್ರವೇ. ನಾವಿರುವುದು ಹೀಗೆ: (ಪಗೋ ಒಂದು ಚಿತ್ರ ಬಿಡಿಸಿಟ್ಟಿದ್ದಾರೆ, ನಂತರ ಕ್ಲಿಕ್ ಮಾಡಿ ಸೇರಿಸುತ್ತೇನೆ - ಸಂ.)

ನಮ್ಮ ಕ್ಲಾಸ್‍ರೂಂದಲ್ಲಿ M.V.Hegde (Leader Writer - cum (namesake) Asst. Editor) ಒಬ್ಬರೇ ಮಾಸ್ತರರು. ನಮಗೂ ಅವರಿಗೂ ನಡುವೆ ಒಂದು file rack ಇದೆ. ಉಳಿದುದೆಲ್ಲಾ ಒಬ್ಬರ ಬೆನ್ನನ್ನು ಇನ್ನೊಬ್ಬರು ನೋಡುವ ವಿಚಾರ. (ಸ್ಫೂರ್ತಿ ಬರುವುದಕ್ಕೆ ಒಳ್ಳೆಯದು!) ಎಂದಾದರೊಮ್ಮೆ (ನಾನು ಮಂಗಳೂರಿನಲ್ಲಿರುವಾಗಲೇ) ಬಂದೇ ಬರುತ್ತೀರಲ್ಲ, ಆಗ ಕಾಣುವಿರಂತೆ ಪ್ರತ್ಯಕ್ಷವಾಗಿ. ಇಲ್ಲಿಗೆ ಪ್ರವೇಶಿಸುವುದೂ ಅಷ್ಟು ಸುಲಭವಲ್ಲ, ಹೊಸಬರಿಗೆ ದಾರಿ ತಪ್ಪುವ ರೀತಿ. Kudva's empire‍ನ ಹಲವಾರು enterprise‍ಗಳನ್ನು ದಾಟಿಕೊಂಡು ಬರಬೇಕು. ನಾವಾಯಿತು, ನಮ್ಮ ಮೂಲೆಯಾಯಿತು. ಹೊರಜಗತ್ತು ನಮಗೆ ಕಾಣುವುದೆಂದರೆ Lorry, Car ಇತ್ಯಾದಿಗಳ ಸಂಗ್ರಹ ಮಾತ್ರ.

RBಯವರಿಗೂ (‘ಗ್ರಾಮಾಯಣ’ದ ಲೇಖಕ ರಾವಬಹಾದ್ದೂರ ಅರ್ಥಾತ್ ಆರ್.ಬಿ.ಕುಲಕರ್ಣಿ ಸಂಕದ ಸಹಾಯಕ ಸಂಪಾದಕರಾಗಿದ್ದರು. -ಸಂ.) - ಸಂಯುಕ್ತ ಅವರಿಗೂ ಪ್ರಶಸ್ತಿ-ಪಾರಿತೋಷಕ ಸಿಕ್ಕಿದ ವಿಚಾರ ಪ್ರಜಾವಾಣಿಯಲ್ಲಿ ಓದಿದ್ದೆ.

**** ರು (ಹೆಸರನ್ನು edit ಮಾಡಲಾಗಿದೆ. -ಸಂ.) ಕಚೇರಿ ಬಿಟ್ಟ ವಿಚಾರ ಹೇಳಿರಲಿಲ್ಲ. ಈಗ ಹೇಳಿದರೆ - ಸುದ್ದಿ ನಿರೀಕ್ಷಿತ (ಬೆಣ್ಣೆಯವರು ಬಾಳುವುದಿಲ್ಲ ಎಂದು ನಿಮ್ಮಲ್ಲೇ ಒಂದು ಬಾರಿ ಹೇಳಿದ ನೆನಪಿದೆ - ಆದುದರಿಂದ credit ಪಡೆಯಬಹುದು ತಾನೆ?) ಈ ನಡುವೆ ‘ಕಲ್ಲೆ ನಾರಾಯಣರಾಯರು’ ನಿಮ್ಮಲ್ಲೆ ಸೇರಿಕೊಂಡುದು ನಿಜವಾಗಿಯೂ ಆಶ್ಚರ್ಯವೆನಿಸಿದೆ. ಹೂಂ .... ಯಾವ ಕೆರೆಗೆ ಯಾವ ಕಪ್ಪೆ ಬರಲಿದೆಯೊ ಎಂದುಕೊಳ್ಳುವ ಹಾಗಾಯಿತು.

ಉಳಿದ ಸಣ್ಣ-ಪುಟ್ಟ ಬದಲಾವಣೆಗಳ ಅಷ್ಟು ಗಮನಾರ್ಹವಲ್ಲ ಎನ್ನಬೇಕೆಂಬ ಆಸೆ. ಆದರೆ, ವಾಸ್ತವವಾಗಿ ಅವು ಗಮನಾರ್ಹವಾದ ಕಾರಣ, ಗಮನಿಸಿಯೇ ತೀರಬೇಕಾಗಿದೆ. Artist ಬಗ್ಗೆ ಹೆಚ್ಚು ಕಮೆಂಟಿಸುವಂತಿಲ್ಲ. **** ರಿಗೆ (ಹೆಸರನ್ನು edit ಮಾಡಲಾಗಿದೆ. -ಸಂ.) ಅಷ್ಟೊಂದು ಸ್ವಾತಂತ್ರ್ಯ ಕೊಟ್ಟುದು ಮಾತ್ರ ಭಯೋತ್ಪಾದಕ - ಇಲ್ಲಿ ಅವರು mischief maker ಎಂಬ ಪ್ರಸಿದ್ಧಿಯನ್ನು ಪಡೆದಿದ್ದಾರೆ. (ಅವರ ಹೆಸರಿನ ವಿಶೇಷ Box ರಚಿಸಬೇಕೆಂದು World Culture article ಬಂದಾಗಲೇ ಅಂದುಕೊಂಡಿದ್ದೆ - ಏನೋ ಪ್ರಾಶಸ್ತ್ಯ ಸಿಕ್ಕಿರಬೇಕೆಂದು). ಈ ಪತ್ರ ನಿಮ್ಮ ಕೈಸೇರಿ ನೀವು ಉತ್ತರ ಬರೆಯುವ ಹೊತ್ತಿಗಾದರೂ 3 shift‍ಗಳಾಗಲಿ ಎಂದು ಹಾರೈಸುತ್ತೇನೆ (ನಮ್ಮಲ್ಲಿನ ಎರಡು 8 ಘಂಟೆ shift‍ಗಳ ಹೊಟ್ಟೆಯುರಿಯೊಂದಿಗೆ!)

ಕುಮಾರ ವೆಂಕಣ್ಣ ‘ಜನವಾಣಿ’ ಸೇರಿಲ್ಲವಾದರೆ ಬೇರೆ ಯಾರಾದರೂ ಸೇರಿದ್ದಾರೆಯೆ? Typical `ಜನವಾಣಿ’ Headings ಕಾಣುವುದಿಲ್ಲವಲ್ಲ. MSRIರಿಗೆ (ಎಂ.ಎಸ್.ರಾಮಸ್ವಾಮಿ ಅಯ್ಯಂಗಾರ್ - ತಾಯಿನಾಡು ಪತ್ರಿಕೆಯಲ್ಲಿ ಉಪಸಂಪಾದಕರಾಗಿದ್ದವರು - ಸಂ.) ಸ್ಥಾನ ದೊರೆತುದು ಸಂತೋಷ (ಎಂದಾದರೂ ಒಂದು ಬಾರಿ ಮನೆ ಎದುರಿಂದ ಹಾದು ಹೋದರೆ ಒಂದು ಸಣ್ಣ ನಮಸ್ಕಾರ ಹೇಳಿ - ಈಗಲೂ ಪತ್ರಿಕೋದ್ಯೋಗಿಗಳ ವಸಾಹತಿನಲ್ಲೇ ಇದ್ದಾರಷ್ಟೆ!) ‘ನಾರದ ಉವಾಚ’ (ನಾಗೇಶರಾಯರು ತಾಯಿನಾಡು ಪತ್ರಿಕೆಯಲ್ಲಿ ಬರೆಯುತ್ತಿದ್ದ ನಿತ್ಯ ಟೀಕಾಂಕಣ. ಪ್ರಜಾವಾಣಿಯ ಛೂಬಾಣದಂತೆ. - ಸಂ.)- ಕೆಲವು ಬಾರಿ ಇಸ್ಪೀಟಾಟವೇ ಆಗಿದೆ ಎನಿಸುತ್ತಿದೆ.

ನಮ್ಮಲ್ಲಿ ಹರಟೆಗಾರರಿದ್ದಾರಾದರೆ, ಅವರಿಗೆ ಅಹ್ವಾನ ಕೊಡಲೆಂದು ಮುಂದೆ ಬಂದವರ (ಅರ್ಥಾತ್ ಪ್ರಕಾಶಕರ) ಯೋಜನೆ ಹರಟೆಗಳದು. ಆದರೆ, ಇದುವರೆಗೆ ಯಾರೂ piece work basis‍ನ ಹರಟೆಗಾರರು ದೊರೆಯದೆ ಅದನ್ನು ಅರ್ಥಗರ್ಭಿತದ MVH ಅವರೇ ತೂಗಿಸಿಕೊಂಡು ಹೋಗುತ್ತಿದ್ದಾರೆ. ಒಂದೆರಡು ಬಾರಿ yours trulyಗೂ invitation ಬಂತು. ಆದರೆ, ಈಗಾಗಲೇ ದೊರೆತ volume ಸಾಕು ಎಂಬ ಸುಪ್ತ ಕಾರಣಕ್ಕಾಗಿ offer decline ಮಾಡಿದೆ.

"ಕಳೆದ ವರ್ಷ ....." ಬೇಡವಾಯಿತು. ಕಿವಿಚುಚ್ಚುವವರ (ಅವರ ದೊಡ್ಡದೊಂದು ತಂಡವೇ ಇದೇ ನಮ್ಮಲ್ಲಿ ... ಪುಣ್ಯಕ್ಕೆ ಅವರಾರೂ Editorial‍ನವರಲ್ಲ. ಹೊರಗಿನವರು ಅಷ್ಟೇ ಸಮಾಧಾನ!) ಪ್ರಭಾವದಿಂದಾಗಿ ಅದು ಬೇಡ ಬೇರೇನಾದರೂ ಮಾಡಿ ... ಎಂಬ ಸುಗ್ರೀವಾಜ್ಞೆ ಹೊರಟ ಕಾರಣವೇ ‘ಹರಟೆ’ಗಳ ಪ್ರವೇಶವಾದುದು. ಈಗಂತೂ ಸಂಕ್ಷಿಪ್ತ ವಾರ್ತಾಸಾರ ಬಿಟ್ಟರೆ ಉಳಿದ ವಿಚಾರಗಳಲ್ಲಿ Times of Indiaದ Leader Page ಆಗಿದೆ. ನೋಡುವಾಗ ಒಂದು ಪೆಟ್ಟಿಗೆಗಳ stack‍ನ ಹಾಗೆ ಕಾಣುತ್ತದೆ. ಓದಲು ಏನಿದೆಯೋ - ಬೇರೆಯವರೇ ಹೇಳಬೇಕು.

ಅರ್ಥಗರ್ಭಿತವನ್ನು ಲೈಕಿಸುವ ವಾರ್ತೆಗಿಂತಲೂ ಹೆಚ್ಚಾಗಿ ನನ್ನ ಪತ್ರವ್ಯವಹಾರವನ್ನು ಖಾ. ರವರು (ಖಾದ್ರಿ ಶಾಮಣ್ಣ ಸಂ.ಕ.ದ ಸುದ್ದಿ ಸಂಪಾದಕರಾಗಿದ್ದರು. - ಸಂ.) ಮೆಚ್ಚುತ್ತಾರೆ ಎಂದು ತಿಳಿದು ನನಗೆ ತುಂಬಾ ಮೆಚ್ಚುಗೆಯಾಯಿತು. ದಿನಕ್ಕೆ average ಮೂರು ಪತ್ರಗಳನ್ನು ದೃಷ್ಟಿಸುವ ಕಾರಣ ಮೆಚ್ಚುಗೆಯಾಗದೆ ಇರುತ್ತದೆಯೆ? ಸ್ಟಾಂಪಿಲ್ಲದ ಅರ್ಜಿಗಳಲ್ಲಿ ಮುಕ್ಕಾಲಂಶ WPB ದಾರಿ ಕಾಣುವುವು. ಆದುದರಿಂದ ದಿನಕ್ಕೆ ಒಂದು ಕಾಲಂ (ಇರಲೇ ಬೇಕು ಎಂಬ Order Standing ಬೇರೆ.) ಪತ್ರಗಳನ್ನು ಮುಂಜಾನೆ ಬಂದ ಹಾಗೆಯೇ ನೋಡಬೇಕು. ಕೊಡುತ್ತೇನೆ, ಮೂಗಿನಲ್ಲಿ ಅಳುತ್ತಾ!

ಸೂರ್ಯನಾರಾಯಣರ ಪೂರ್ವಜನ್ಮ ಫಲ - ನಿಜವಾಗಿಯೂ ಅದೇ. ಏನಾಗಿ ಬಿಟ್ಟರೊ ... ನಾನಾಗಿದ್ದರೆ ಖಂಡಿತವಾಗಿಯೂ ಬಿಡುತ್ತಿರಲಿಲ್ಲ. ಆದರೆ ನಾನು ಹಲಿಂಸೂ ಅಲ್ಲವಲ್ಲ!

VTR ಶೆಟ್ಟಿ (ಪ್ರಸಿದ್ಧ ಪತ್ರಕರ್ತ ವಿ.ಟಿ.ರಾಜಶೇಖರ ಶೆಟ್ಟಿ ತಮ್ಮ ವೃತ್ತಿ ಜೀವನವನ್ನು ತಾಯಿನಾಡುವಿನಲ್ಲಿ ಆರಂಭಿಸಿದರು - ಸಂ.)ಬಹುಶಃ ಮದುವೆಯಾದ ನಂತರ ಮುಂಬಯಿಗೆ ಹೋಗಿರಬೇಕು - *********** [Edit ಮಾಡಲಾಗಿದೆ. - ಸಂ.] ಅಲ್ಲಿ ನಿಂತರೆ ತಾನೆ! ಆನಂತರ ನೋಡೋಣವಂತೆ. (Digressing from the point ಒಂದು gossip item. *************** [Edit ಮಾಡಲಾಗಿದೆ. - ಸಂ.])

ಸತ್ಯನಿಂದ (ಕನ್ನಡಪ್ರಭದ ಕೆ.ಸತ್ಯನಾರಾಯಣ ತಾಯಿನಾಡುವಿನಲ್ಲಿ ಪಗೋ ಮತ್ತು ನಾಗೇಶರಾಯರ ಸಹೋದ್ಯೋಗಿಯಾಗಿದ್ದರು. - ಸಂ.) ಒಂದು ತಿಂಗಳ ಹಿಂದೆ ಒಂದು ಕಾರ್ಡು ಬಂದಿತ್ತು. ಗೋಯೆಂಕಾ ಬಗ್ಗೆ rumour ಕೂಡಾ ತಿಳಿದು ಬಂದಿತ್ತು. (ಇದಕ್ಕೆ connecting matter ಮತ್ತು ಅದರ Background material ಆನಂತರ special items ಆಗಿ reopen ಮಾಡುತ್ತೇನೆ.)

ಕಂಪೋಜಿಟರರ ಪೇಚಾಟ ನಮಗೂ ಬಿಟ್ಟಿಲ್ಲ. ಅದೊಂದು ಕಥೆ ಮುಂದಿನ ಪುಟಗಳಲ್ಲಿ ಬರಲಿದೆ.

"ದಿನಕಳೆದಂತೆ ಮುದಿ ಮನೋಭಾವ" ... ಹಾಂ! ಇಷ್ಟು ಬೇಗನೆ! ಸುಧಾರಿಸಿಕೊಳ್ಳಿ ಸ್ವಾಮೀ. ಈ ‘ನೆಮ್ಮದಿ’ಯ ವಿಚಾರ ಚರ್ಚಿಸುವಷ್ಟು freedom ನನಗಿನ್ನೂ ದೊರಕಿಲ್ಲ ... ಆದುದರಿಂದ ಈಗ ಚರ್ಚಿಸುವ ಸ್ವಾತಂತ್ರ್ಯವನ್ನೂ ನಾನು ವಹಿಸುವುದಿಲ್ಲ ... ಅಂದರೂ, ಆ ಕಾಲವೂ ಒಂದು ಬರಬಹುದು ಎಂಬ ಆಸೆಯನ್ನಷ್ಟೇ - ನನ್ನ ಪರಿಚಯವೆಂದರೆ slow poisioningನ ದಾರಿ ಎಂಬ ಕೀರ್ತಿ ನನಗಿರುವ ಕಾರಣ - ಇರಿಸಿಕೊಂಡಿದ್ದೇನೆ. ಆಗ ನನ್ನದೂ ಒಂದಷ್ಟು ಕಟ್ಟೆಪುರಾಣ ಕೇಳುವಿರಂತೆ.

ನಮ್ಮಲ್ಲಿನ ಹವೆ - ಹೇಳಿ ಪ್ರಯೋಜನವಿಲ್ಲ ಮಾರಾಯ್ರೆ - ಪ್ರಿಕ್ಲಿ ಹೀಟು. ನಮ್ಮ ಆಫೀಸಿನಲ್ಲಿ (ಸದ್ಯಕ್ಕೆ ನಾನೊಬ್ಬ ಮಾತ್ರ) ಬನೀನುಧಾರಿಯಾಗಿ ಕೆಲಸ ಮಾಡುವ ಹಾಗಿದ್ದೇನೆ. ಉಳಿದವರಿಗೆ ಅಭ್ಯಾಸವಾಗಿದೆಯೊ ಏನೊ! ಅದಕ್ಕೇ ಕುಮಾರ ಕಂಠನ ಒದ್ದಾಟ ನೋಡಲಾಗದೆ ಅವನನ್ನು ‘ಅಜ್ಜನ ಮನೆಗೆ’ ಪಾರ್ಸೆಲ್ ಮಾಡಿದುದು. ಇನ್ನು ಮುಂದೆಯೂ ಅದೇ ರೀತಿಯ ವ್ಯವಸ್ಥೆಯನ್ನೇ ಏನಾದರೂ ಮಾಡಬೇಕಷ್ಟೆ - ಬೇರೆ ನಿರ್ವಾಹವಿಲ್ಲ.

ಈಗಲಂತೂ, ಪುಟದ ಮೂರನೆ ಗೆರೆಗೆ ಮುಟ್ಟುವಾಗ ಹೊರಗೆ ಇದ್ದಕ್ಕಿದ್ದಂತೆ ಜಡಿಮಳೆ ಸುರಿದು ಮೂರು ಬಾರಿ ಪವರ ಆಫ್ - ಕಾರ್ಯಾಲಯ ಕತ್ತಲಲ್ಲಿ ಮುಳುಗಿತ್ತು. ಈ ಮಳೆಯಿಂದಾಗಿ ಯಾವ ಉಪಕಾರವೂ ಇಲ್ಲ - ನಾಳೆಯ ದಿನ ಸೆಖೆ ಇನ್ನಷ್ಟು ಹೆಚ್ಚುತ್ತದೆ ಅಷ್ಟೆ.

ಅವೆಲ್ಲವೂ ಮುಗಿದು ಈಗ outstanding take.

ಕರ್ನಾಟಕ ಟೈಮ್ಸ್‍ದ ರೂಮರ್ ವಿಚಾರ ತಿಳಿಸಿ. ಸತ್ಯನ ಪತ್ರ ಬರುವ ಎರಡು ದಿನಗಳ ಮೊದಲಿನಿಂದ ಆರಂಭವಾದ ಒಂದು ದುಸ್ಥಿತಿ ಈಗಲೂ ಮುಂದುವರಿಯುತ್ತಾ ಇದೆ. ನೀವು ‘ವಿಮಾನ ಸಂಚಿಕೆ’ಯ ಕೆಲವು ಜಾಹೀರಾತುಗಳನ್ನು ಓದಿದ್ದರೆ ಪರಿಸ್ಥಿತಿ ಅರ್ಥವಾಗುತ್ತಿತ್ತು. Wanted graduates for trg as Sub Editors ಎಂಬುದರ ಮೂರು repeat insertions ಬಂದವು. ಅರ್ಜಿ ಕೊಟ್ಟವರು ಒಬ್ಬರು ಮಾತ್ರ!

ಅಂದರೆ, ಕಳೆದ ತಿಂಗಳಷ್ಟೇ capital ಎಂದರೆ ರಾಜಧಾನಿ ಎಂದು ಮಾತ್ರವೇ ಗೊತ್ತಿದ್ದ ಒಬ್ಬ graduವೇಟರು ಕೆಲಸ ಬಿಟ್ಟೋಡಿದರು. ಅವರ ಮೊದಲು ಇಬ್ಬರು ಹೋಗಿದ್ದರು. ಈ ದಿನದಿಂದ ಹುರುಳಿ ಭೀಮರಾಯರ ಮಗ ರಾಮಚಂದ್ರರಾಯರು ರಾಜಿನಾಮೆ ಇತ್ತಿದ್ದಾರೆ. ಇನ್ನೊಂದು ವಾರದಲ್ಲಿ ಒಬ್ಬರು ಬಿಡಲಿದ್ದಾರೆ. ಅಲ್ಲಿಗೆ ಹಗಲು ಪಾಳಿಯಲ್ಲಿ ಮೂರು ಜನ, ರಾತ್ರಿಯಲ್ಲಿ ನಾಲ್ವರು ಉಳಿದಂತಾಯಿತು. ಈಗಂತೂ 2nd Pageನ ಜೊತೆಗೆ 3 - 4 ಮತ್ತು ಕೆಲವು ಬಾರಿ ಮುಖಪುಟಕ್ಕೂ matter ತಯಾರಿಸಿಟ್ಟು ಜೊತೆಗೆ ವಾರದ ಆತ್ಮಹತ್ಯೆಯ ಎರಡು ಪುಟಗಳನ್ನು ಸಿದ್ಧಗೊಳಿಸಬೇಕಾಗುತ್ತದೆ. ಆದರೂ ಕೆಲಸ ಹೆಚ್ಚಿರುವುದಕ್ಕೆ ಅಲ್ಲ, ನನ್ನ ಬೇಸರ. ಅನಗತ್ಯವಾದ ತೊಂದರೆಗಳನ್ನು ಬೇಕೆಂದೇ ಕೊಡುತ್ತಾರಲ್ಲ ಎಂಬುದಕ್ಕೆ ಅಷ್ಟೆ. ಆದ್ದರಿಂದ ಇಲ್ಲಿ ಎರಡು ವರ್ಷವಾದರೂ ಕಳೆಯಬೇಕೆಂಬ ಆಸೆ ಇರಿಸಿ ಬಂದು ಸೇರಿದ್ದೆ. ಈಗ ಸಾಧ್ಯವಾದಷ್ಟು ಬೇಗ ಬೇರೆಲ್ಲಾದರೂ ಹೋಗೋಣವೆಂದಿದ್ದೇನೆ. ನಿಮ್ಮಲ್ಲಿ ಏನಾದರೂ opening? (ನಾನು ತಮಾಷೆ ಮಾಡುತ್ತಿಲ್ಲ, serious ಆಗಿಯೇ ಬರೆಯುತ್ತಿದ್ದೇನೆ ... ) ಬೇರೆಯೂ ಪ್ರಯತ್ನ ಮಾಡುತ್ತಾ ಇದ್ದೇನೆ, ನೋಡಬೇಕು.

ಅದು ಹಾಗಾದರೆ, ಕಂಪೋಜಿಂಗ್ ವಿಭಾಗದ ಅವಸ್ಥೆ ಬೇರೆಯೇ ಇದೆ. ದಿನ (ಅಂದರೆ 8 ಘಂಟೆ) ಒಂದಕ್ಕೆ 5 ಕಾಲಂ solid matter ಎಳೆಯುವ ಪ್ರಭೃತಿಗಳು ಇಲ್ಲಿನವರು. ಅದೂ 10 pt.ನಲ್ಲಿ. ಆದರೆ ಪ್ರಯೋಜನವೇನು? ಅವರಿಗೆ ದೊರೆಯುವ ವೇತನವಂತೂ stationary levelನಲ್ಲೇ ಇದೆ. ಯಾರಾದರೂ increment ಸುದ್ದಿ ಎತ್ತಿದರೆ ‘ಸಿಗುವಲ್ಲಿಗೆ ಹೋಗಬಹುದು’ ಎಂಬ ಉತ್ತರ ಸಿದ್ಧವಾಗಿಯೇ ಇರುತ್ತದೆ. ಉತ್ತರ ಪಡೆದು ಕೆಲವರು ಹೋಗಿಯೂ ಇದ್ದಾರೆ. ಆದುದರಿಂದ ಅಲ್ಲೂ shortage. Deadline ಹೇಗೋ meet ಆಗುತ್ತದೆ. ಅಂತೂ ಪರಿಸ್ಥಿತಿ ಯಾವ ಕಾರಣವೂ ಇಲ್ಲದೆ ‘ಅಗ್ದಿ ಭಯಂಕರ’ ಆಗಿ ನಿಂತಿದೆ.

ಆದುದರಿಂದ ಪರಿಸ್ಥಿತಿ ಎಲ್ಲಿ ಬಂದು ನಿಲ್ಲುವುದೋ ಹೇಳಲು ಸಾಧ್ಯವಿಲ್ಲ. ಈಗ, ‘ಮಂಗನ ಕೈಯ ಮಾಣಿಕ್ಯ’ದ ಕಥೆಯೊಂದು ಇಲ್ಲಿ ನಡೆಯುತ್ತಿರುವ ವಿಚಾರ. Too hot to handle. ಅದನ್ನು ನಾನು Kodialabail ಬಿಟ್ಟ ದಿನವೇ ಹೇಳಬಹುದು. ಅದಕ್ಕೆ ಮೊದಲು ಹೇಳಲಾರೆ. ಹಾಗಿದೆ ಸ್ವಾಮೀ, ನಮ್ಮಲ್ಲಿನ ಕಥಿ.

ಶ್ರೀ DH ಶ್ರೀನಿವಾಸರು Chief Reporter, Tainadu ಗೊತ್ತು ತಾನೆ? (DH ಶ್ರೀನಿವಾಸ - ‘ಡಚ್ಚ’ ಮುಂದೆ Deccan Heraladನ Sports Reporter ಆದವರು - ಸಂ.]. ಮಂಗಳೂರಿಗೊಂದು ಬಾರಿ ಬಂದು ಹೋಗಿದ್ದರಂತೆ..... ನನಗೆ ಗೊತ್ತಾಗದಂತೆ. ನಾನು ಆನಂತರ ಸುದ್ದಿ ತಿಳಿದು , ಒಂದು ಕಾರ್ಡ್ ಅವರಿಗೆ ಬರೆದಿದ್ದೆ.

ಅಂದ ಹಾಗೆ ಈ ದಿನ ಕಚೇರಿಗೆ ಮಾಜಿ ಮುಖ್ಯಮಂತ್ರಿ ಸಿದ್ದವನಹಳ್ಳಿ, ಮಾಜಿ ಮಂತ್ರಿ H.K.V.Goudh, ಮಾಜಿ ಮಂತ್ರಿ B.V.Baliga ಇವರು ಆಗಮಿಸಿದ್ದರು. "ನಾನು ಅವರನ್ನು ಮಾತನಾಡಿಸಲಿಲ್ಲ". ಅದುವಲ್ಲದೆ ಬಸವನಗುಡಿ ಕಲಾಮಂದಿರದ ಲೇಖಕ ಮ.ನ.ಮೂರ್ತಿಯವರೂ [ಕಾದಂಬರಿಕಾರ ಮ.ನ.ಮೂರ್ತಿ ‘ಜನವಾಣಿ’, ‘ಪ್ರಜಾಮತ’ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದರು - ಸಂ.]ಬಂದಿದ್ದರು. ‘ಬೆಂಗಳೂರಿನ ವಿಶೇಷ’ ಸುದ್ದಿ ಏನೂ ಹೇಳಲಿಲ್ಲ.

ಉಳಿದವರೆಲ್ಲ ಹೇಗಿದ್ದಾರೆ? ನನ್ನಲ್ಲಂತೂ ಯಾವ ಸುದ್ದಿಯೂ ಇಲ್ಲ. ‘ವಿಚಾರವಾಣಿ’ ಎಂಬ ಮಾಜಿ ಶಿವರಾಮ ಕಾರಂತ ಸಂಪಾದಿತ, ಈಗ ಡಾಯಂ.ಬಿ.ಮರಕಿಣಿ ಎಂಬುವರ editingನಲ್ಲಿ ಹೊರಬರುತ್ತಿರುವ ವಾರಪತ್ರಿಕೆಯೊಂದು ಈಗ ಮೂರು ವಾರಗಳಿಂದ ಪುತ್ತೂರಿನ ವಾಗ್ದೇವಿ (?) ಅಚ್ಚುಕೂಟದಿಂದ ಪ್ರಕಟವಾಗುತ್ತಿದೆ ... ಎಂಬುದೊಂದು ಮಾತ್ರ ಸುದ್ದಿ. ಅಲ್ಲೇ ಇನ್ನೊಂದು ವಾರ ಪತ್ರಿಕೆಯೂ ಜನಸಂಘದ ವತಿಯಿಂದ ಪ್ರಸಿದ್ಧವಾಗುತ್ತಿದೆ. ಅದರ ಹೆಸರು "ಭಾರತ".

ವಿವರವಾಗಿ ಬರೆಯುತ್ತೀರಾ? ಏನು ಸುದ್ದಿಯಾದರೂ ಚಿಂತಿಲ್ಲ ... ಯಾವ method ಆರಂಭಿಸಿದರೂ ಆಗಬಹುದು. ಘಂಟೆಯೂ 1:20 ಆಯಿತು. ಪತ್ರವೂ ಮುಗಿಯುತ್ತಾ ಬಂತು. ಕಣ್ಣೆವೆ ಎಳೆಯುತ್ತಿದೆ. ಬರಲೆ? ನಮಸ್ಕಾರ.

ನಿಮ್ಮ

ಪಗೋ

No comments: