ಸುದ್ದಿಜೀವಿ

ಸುದ್ದಿಜೀವಿ
ನಾಗೇಶರಾವ್

Thursday, May 14, 2009

Deadline meetiಸಿದಂತೆಯೂ ಆಯ್ತು - ಸ್ವಾರಸ್ಯದ ಅನುಭಾವವೂ ಆಯಿತು!

ಪ.ಗೋ. ಮತ್ತು ಹೆಚ್.ಆರ್.ನಾಗೇಶರಾಯರ ನಡುವಣ ಪತ್ರ ವ್ಯವಹಾರ ಕೇವಲ ಕಾರ್ಡುಗಳಿಗಷ್ಟೇ ಮೀಸಲಿತ್ತೆಂಬ ನನ್ನ ಊಹೆ ಸುಳ್ಳಾಯಿತು. ದೀರ್ಘ ಪತ್ರಗಳ ಗುಚ್ಛವೊಂದನ್ನು ಬಿಡಿಸುತ್ತಾ ಹೋದೆ. 27-11-1959ರಂದು ಪ.ಗೋ. ಬರೆದಿರುವ ಈ ಎಂಟು ಪುಟಗಳ ಪತ್ರದಲ್ಲಿ ಸ್ವಾರಸ್ಯದ ಅನುಭಾವ ಖಂಡಿತವಾಗಿಯೂ ನಿಮಗಾಗಬಹುದೆಂಬ ನಂಬಿಕೆಯಿಂದ ಯಥಾವತ್ತಾಗಿ ನಕಲಿಸಿದ್ದೇನೆ. ಇನ್ನು ಪ.ಗೋ. ಉಂಟು, ನೀವುಂಟು!

----------------------

EMBARGO: NOT TO BE READ BEFORE 12 MIDNIGHT DEC 31 OF 1959 ಪತ್ರದ ಮೊದಲ ಸಾಲಿನಲ್ಲಿ ಹೀಗೊಂದು ಮುನ್ಸೂಚನೆಯಿದ್ದರೂ 30-11-1959ರಂದು ಪತ್ರ ಸ್ವೀಕರಿಸಿದ ನಾಗೇಶರಾಯರು EMBARGOಗೆ ಕೇರ್ ಮಾಡದೆಯೇ ಓದಿ 17-12-1959ರಂದೇ ಮಾರೋಲೆ ಬರೆದು ಬಿಡುತ್ತಾರೆ!
ಗೆಳೆಯ ಹಾ.ರ.ನಾ.ರಾಯರಿಗೆ - ನಮಸ್ಕಾರಗಳು.
ನಿಮ್ಮ ಕೈಬರಹ ಕಂಡಾಗಲೇ ಬಂತು ಕೆಲವು ನ.ಪೈ.ಗಳಿಗೆ ಸಂಚಕಾರ ಎಂದುಕೊಂಡೆ. (ಕಳೆದ ಬಾರಿಯ postage ಸರಿಯಾಗಿತ್ತೆ?). ಒಂದು ಬಾರಿ ಬೇring ಮಾಡಬಾರದೇಕೆ? ಎಂದೆನಿಸುತ್ತದೆ. ಆದರೆ, ನನಗೇ ಹಿಂದಿರುಗಿಸಿದರೆ ಗತಿ? ನನ್ನ ವಿಳಾಸ ಬರೆಯದೆ ಕಳುಹುವ ಆಲೋಚನೆಯೂ ಬರುತ್ತಿದೆ ಒಂದೊಂದು ಬಾರಿ.
Deadline ನೆನಪು ಮಾಡಿ ಉಪಕಾರ ಮಾಡಿದಿರಿ. ಇಲ್ಲವಾದರೆ ಉತ್ತರಿಸೋಣ ಎಂದು ಸುಮ್ಮನಾಗಿ ಪತ್ರ ಪುಸ್ತಕಗಳಡಿ ಸೇರಿ ಮಾಯವಾಗುತ್ತಿತ್ತು. ಹೀಗೆಯೇ ಬರೆಯಬಹುದಿತ್ತೆನ್ನಿ - ಆದರೆ ವ್ಯಕ್ತಿ ಎದುರಿಗೇ ಕುಳಿತು ಪ್ರಶ್ನಿಸುತ್ತಿರುವಂತೆ (ಅಥವಾ ಕೆಲವು ನಿಮಿಷಗಳ ಮಿತಿಯ ದೂರವಾಣಿ ಕಾಂಡದ ಕರೆ ಮಾಡಿದಂತೆ) ಬರುವ ಸ್ವಾರಸ್ಯ ಹೀಗೇ ಬರೆದರೆ ಬರುವುದಿಲ್ಲವಲ್ಲ! ಅದಕ್ಕಾಗಿ deadline meetiಸಿದಂತೆಯೂ ಆಯ್ತು - ಸ್ವಾರಸ್ಯದ ಅನುಭಾವವೂ ಆಯಿತು ಎಂದುಕೊಂಡು ಈಗಲೇ, ಈ ರಾತ್ರಿಯೇ (ಗಾಬರಿಯಾಗಬೇಡಿ, ಇನ್ನೂ ಹನ್ನೊಂದು ಘಂಟೆ ...) ಬರೆಯುತ್ತಿದ್ದೇನೆ.
ಇನ್ನು ಪೀಠಿಕಾ ಪ್ರಕರಣದಲ್ಲೇ ಇರುವಾಗ, ಕಚೇರಿಯ manifold ಕಾಗದವಿದೆ. (ಬಹುಶಃ ಜೇಬಿನಲ್ಲಿ ಅಂಚೆ ಚೀಟಿಯ ವ್ಯವಸ್ಥೆಗೆ ಪೈಸೆಗಳೂ ಇರಬಹುದು ...). ಕೆಲವು ಪುಟಗಳಷ್ಟಾದರೂ ಬರೆದು ತುಂಬಿಸದಿದ್ದರೆ Lineage ಸಿಗದೆ ಬಾಕಿಯಾಗಬಹುದು ಎಂದು ಭಾವಿಸಿದ್ದೇನೆ. ಒಂದೊಂದು ಬಾರಿ ನಮ್ಮೊಳಗಿನ ಪತ್ರ ವ್ಯವಹಾರದ ಕ್ರಮ (ಅಂದರೆ ನಿಮ್ಮಿಂದ ಬರುವ ಅಂತರ್ದೇಶೀಯ ಮಾರೋಲೆಗಳನ್ನು ಉದ್ದೇಶಿಸಿಯಲ್ಲ) ನೋಡುವಾಗ ನನ್ನ ‘ಧೈರ್ಯ’ಕ್ಕೆ ನಾನೇ ಬೆರಗಾಗಿ ಭೇಷೆಂದು ಬೆನ್ನು ತಟ್ಟಿಕೊಳ್ಳುವಂತಾಗುತ್ತದೆ. ‘ತಾಯಿನಾಡು’ ಕಚೇರಿಯಲ್ಲಿ Leader - writer (ದ್ವಯಾರ್ಥವೆನ್ನಿ, ಬೇಕಾದರೆ) ಆಗಿದ್ದಾಗ ಒಬ್ಬಿಬ್ಬರ ಹೊರತು ಉಳಿದವರಿಗೆ ನಾಗೇಶರಾಯರು unapproachable ಎಂಬ ಭಾವನೆ ಮೂಡಿತ್ತು. (ನಾನು ಅದಕ್ಕೆ ಹೊರತಾಗಿರಲಿಲ್ಲ). ಅಂತಹವರೊಡನೆ ಈಗ ಧೈರ್ಯವಾಗಿ ಹರಟೆಯೋಪಾದಿಯಲ್ಲಿ ಪತ್ರಿಸುವ ರೀತಿ ಕಂಡಾಗ, ನನ್ನದೊಂದು aಚೀವ್‍ಮೆಂಟ್ (ಇಲ್ಲದ ಕ್ರಮದಲ್ಲಿ ಚೀವ್‍ಮೆಂಟ್) ಇದು ಎಂದೆನ್ನಬೇಡವೆ? ಈಗಲೂ ಒಂದು ಧೈರ್ಯ - audacityಗಾಗಿ ಸಿಟ್ಟು ಬಂದು ಮುಖ ಕೆಂಪಾದರೂ ಕಾಣಿಸುವುದು ನನಗಲ್ಲವಲ್ಲ ... ಪ್ರೇಮಾ ನಾಗೇಶರಾಯರಿಗೆ ತಾನೆ? (ಹೆಸರು ತಪ್ಪಿಲ್ಲವೆಂದು ನಂಬಿದ್ದೇನೆ)
ಅಂತೆಂಬಾಗ -
ಇದೋ ಆರಂಭಿಸುತ್ತೇನೆ ಇನ್ನು. ನಿಮ್ಮ ಪತ್ರದ clause by clause consideration.
ನನ್ನ ಪತ್ರಗಳಲ್ಲಿ ಸ್ವಾರಸ್ಯವಿರುತ್ತದೆ (ಎಷ್ಟಾದರೂ ಅದು light reading matter!) ಎಂಬುದು ನನಗೆ (capitalನ) ಗೊತ್ತಿರುವುದಿಲ್ಲವೆ? ಆದರೂ dull etc. ಎನ್ನುವುದು ಸಂಪ್ರದಾಯವೆಂದು ಹಾಗೆ ಬರೆದೆ. ಆದರೆ ನಿಮ್ಮ ಬಳಿ formality - 240 ಮೈಲಿ ದೂರದಲ್ಲಿರುವಾಗ - ಬೇಡವೆಂದು ಯಾರಿಗೆ ನೆನಪಾಗಿತ್ತು! ಆದರೆ ನೀವು ಹಿಂದಿನ ಪತ್ರಕ್ಕೆ ಇತ್ತ ಮನ್ನಣೆ ನನ್ನ ತಲೆಯೊಳಗೆ ಹೋಗಿದೆ (i.e., gone into my head) ಆದರೂ ನಿಮ್ಮ ಅಂಚೆ ನಿರೀಕ್ಷೆ ತಪ್ಪಬಾರದಲ್ಲ. ನನಗಾದರೆ ಮಿತ್ರಪತ್ರಾಗಮನ ಸಂಪಾದಕರ ಪತ್ರದೊಂದಿಗೆ ಆದ ಕಾರಣ, ಅನಿರೀಕ್ಷಿತವಾಗಿ ದೊರೆವ ಆನಂದ. (ಇಂದಿನ ಪತ್ರವೂ ಹಾಗೆಯೇ ಆಗಿತ್ತು!). ನಾನು ನಿರೀಕ್ಷಿಸುವುದು ‘ಪ್ರಿಯ ಸಂಪಾದಕರೇ!’ ಸಂಬೋಧನೆ. "ಗೆ ಗೋ" ಕಾಣ ಸಿಕ್ಕಾಗ ಸಂತೋಷವಾಗುತ್ತದೆ. ಇರಲಿ, ನಿಮಗೆ monthly n / letter promise ಮಾಡಿದುದು - reciprocate ಮಾಡಿಸಿಕೊಳ್ಳುವ ಆಸೆಯಿಂದಲೇ ಸ್ವಾಮೀ! ಅದರಲ್ಲಿ ಸಂದೇಹವೇನೂ ಇಲ್ಲ. ಏಕೆಂದರೆ, ತಮ್ಮ ಬರೆದ letterಗಳು (ನನ್ನ ಉತ್ತರಗಳೂ) ಯಾವಾಗಲೂ curt; familiarity bred contempt ತುಂಬಿದುದಾಗಿರುತ್ತವೆ. ಆದರೆ, ನಿಮ್ಮಿಂದ ಕೆಲವು ಉವಾಚ (- ನಾರದ)ಗಳಾದರೂ ಸಿಕ್ಕರೆ! [ನಾಗೇಶರಾಯರು ‘ತಾಯಿನಾಡು’ ಪತ್ರಿಕೆಗೆ ಆದಿನಗಳಲ್ಲಿ ‘ಟಿಯೆಸ್ಸಾರ್’ ‘ಪ್ರಜಾವಾಣಿ’ಗೆ ಬರೆಯುತ್ತಿದ್ದಂತೆ ‘ನಾರದ ಉವಾಚ’ ದೈನಿಕ ಟೀಕಾಂಕಣ ಬರೆಯುತ್ತಿದ್ದರು - ಸಂ.] ಅದೇ ಸಂತೋಷ. ಬೆಂಗಳೂರು ತಂಗಾಳಿಯ ಆನಂದವನ್ನೇ ಅನುಭಾವಿಸಿಕೊಂಡ ಹಾಗಾಗುತ್ತದೆ. Show steal ಮಾಡುತ್ತೀರಷ್ಟೆ!
ಇನ್ನು ನನ್ನ all absorbing portfolio ವಿಚಾರ:-
ಬಹುಶಃ ನೀವು ಪತ್ರ ಬರೆಯುತ್ತೀರೆಂದು ನಮ್ಮ publisher - cum - Mg. Directorರಿಗೆ ಸೂಚನೆ ಸಿಕ್ಕಿರಬೇಕು. ಇಲ್ಲವಾದರೆ ನಿನ್ನೆಯ ದಿನವಷ್ಟೆ ನನ್ನ ಕೆಲಸದ ವ್ಯವಸ್ಥೆಯನ್ನೇಕೆ ಬದಲಾಯಿಸಿದರು. ಈಗ ಸಂಪಾದಕರ ಪತ್ರ, weekly ವಿಭಾಗಗಳೊಂದಿಗೆ undesignated News Editor ಆಗಿದ್ದೇನೆ. ಒಂದು ಉಪಕಾರವಾಗಿದೆ. Continuous night shift ಇದ್ದುದು ಹೋಗಿ temporarily continuous (ಅಂದರೆ whims ಪ್ರಕಾರ ಇದ್ದಕ್ಕಿದ್ದಂತೆ ಬದಲಾವಣೆಯಾಗಲೂ ಬಹುದು) day shiftಗೆ ಬಿದ್ದಿದ್ದೇನೆ. ಒಂದಷ್ಟು ಸಿಗರೇಟ್ ವೆಚ್ಚ ಉಳಿಯಿತಾದರೂ ಬೇರೆ ವೆಚ್ಚ ಹೆಚ್ಚಿತು. ಆದರೆ, ದಿನಕ್ಕೆ ಅರ್ಧ ಘಂಟೆಯಾದರೂ ಬಾವಟೆ ಗುಡ್ಡೆಯ ಗಾಳಿ ತಿನ್ನಬಹುದು (ಸೆಕೆ ನಿವಾರಿಸಿಕೊಳ್ಳಬಹುದು). ಸಮುದ್ರದ ಕಡೆಗೇ ನೋಡುತ್ತಿರಬಹುದು. ("ರೀ, ... ನಾನೂ" ಎನ್ನುವವರೂ ".. ಪ್ಪಾ, ನಾನೂ" ಎನ್ನುವವರೂ ಮಂಗಳೂರಿಗೆ ಬರುವ ವರೆಗಾದರೂ!). ಸದ್ಯಕ್ಕಂತೂ, T' printerನಿಂದ - ಅದರಲ್ಲಿ ಬರುವ messageಗಳೂ ಅತ್ಯಲ್ಪ - ಕಾಗದ ಹರಿದು, ರಾತ್ರಿಯವರು ಬಿಟ್ಟಿದ್ದೇನಾದರೂ (ಅದು ಬೇಕಾದಷ್ಟ್ರಿರುತ್ತದೆ) ಇದ್ದರೆ ಅವುಗಳನ್ನು ನನ್ನ shiftನಲ್ಲಿರುವವರಿಗೆ ಹಂಚಿ ಕೊಟ್ಟು, ನಾನೂ ಬರೆದು ಹಾಕಿ, list ಮಾಡಿಟ್ಟು ಸಂಜೆ (ಅಂದರೆ 7 ಘಂಟೆಗೆ ... ಇದು ನಿಮ್ಮ ಹಾಗೆ cosmopolitan centre ಅಲ್ಲ) buzz offiಸುವುದು!

ಆರಂಭದ ದಿನ office ರಾಜಕೀಯ ಇಲ್ಲೂ ತಲೆ ಎತ್ತಿತೆನ್ನಿ. ನಮ್ಮ ಕೈಯಲ್ಲೇ ಬರೆಸುತ್ತಾನೆ - ಇವನು ಏನೂ ಬರೆಯುವ ಉದ್ದೇಶ (ಬಹುಶಃ) ಇಲ್ಲದಿರಬೇಕು ಎಂದು ಭಾವಿಸಿದ್ದ ಒಬ್ಬ fastest S.E. ಮಹಾಶಯ. ಉಳಿದಿಬ್ಬರು graduate muffs - ಅವರ ಬಗ್ಗೆ no comment. ಆದರೆ, ಪತ್ರ ಕತ್ತರಿ - weekly matter (quality ಕೇಳಬೇಡಿ) ಮುಗಿಸಿ "ಬಾರೋs ಮಗನs ನಾನೇನ ನಿನ್ಕಿಂತ ಉಳಿಕಿ ಅಂದ್ಕೊಂಡಿದೀs ಏನs!" ಎಂದುಕೊಂಡೇ ಸರಿಯಾಗಿ ಗೀಚಿದೆ - number of sheets ಸಾಕಷ್ಟು ಇತ್ತು. ಈ ದಿನವೂ ಹಾಗೆಯೇ ಆದ ಕಾರಣ "ಇದು ನಾನು ಗ್ರಹಿಸಿದಷ್ಟು ಹಾಳಲ್ಲ ಮಾರಾಯ್ರೆ" ಎಂದು ಸುಮ್ಮನಾಗಿದ್ದಾನೆ. ಅವನೊಬ್ಬ good worker - ಆದರೆ, ನನ್ನಿಂದಲೂ childish, ಅಲ್ದೆ ದೋಷ. ಉಳಿದಿಬ್ಬರು Bitt-ers (ಇದೂ bar ಭಾಷೆಯಲ್ಲ!). ನಿಜವಾಗಿ ನೋಡಿದರೆ ಈ ವ್ಯವಸ್ಥೆಯೇ ಒಳ್ಳೆಯದೆಂದು ಕಾಣುತ್ತದೆ.
ನಮ್ದು ಕಾಮ್ ಹೋಗಯಾ ಎಂದು ಇದ್ದುಬಿಡಬಹುದು. ಆದರೆ ಫ್ರಂಟ್ page display ಕುಲಗೆಟ್ಟು ಹೋಗುತ್ತದೆ ಎಂದೊಂದೇ ಬೇಸರ. "ಹೂಂ, ಮಾಲಿಕರಿಗೇ ಬೇಡವಾಗಿದೆ ಅದು, ನನಗೇಕೆ ಆ ಚಿಂತೆ" ಎಂದೆನಿಸುತ್ತಿದೆ ಒಮ್ಮೊಮ್ಮೆ. ಅವರಿಗಂತೂ advt ಒಂದೇ preoccupation. Adsಗೆ ಬೇಕಾಗಿ ಇದ್ದಕ್ಕಿದ್ದಂತೆ 2 ಪುಟ ಜಾಸ್ತಿ ಮಾಡುತ್ತಾರೆ ಒಂದೊಂದು ಬಾರಿ. ಸಾಯುವವರು - ನಾವಲ್ಲ, ನಮಗಂತೂ ದಿನಾಲೂ 6 ಕಾಲಂ matter (left overs) omit ಮಾಡುವುದೇ ಕೆಲಸ - ಕಂಪಾಸಿಟರು "ಫಡ್ಚ" ಆಗುತ್ತಾರೆ. ಇಲ್ಲೂ, Leader writer & ಅರ್ಥಗರ್ಭಿತ ವಾರ್ತೆ ಲೇಖಕರು - cum - Asst Editorರ good booksನಲ್ಲಿದ್ದೇನೆ. ಆದುದರಿಂದ ಒಂದು ರೀತಿ .........
ಇನ್ನುಳಿದ ರಾಜಕೀಯ ಮುಂದೆ ಎಂದಾದರೂ -----
ನಿಮ್ಮ ಕೆಲಸದ ವಿವರ ದೊರೆತಿತು (ನನಗೆ ಅಸೂಯೆ ಮೂಡುತ್ತಿದೆ ...). ಆದರೆ moff page's loss is N.R's gain ಅಲ್ಲವೆ? Page ನೋಡಿದಾಗ ವ್ಯಾಸರಾಯರ styleನಂತೇ ಕಂಡಿತ್ತು. ಆದರಿಂದಲೇ ಹಾಗೆ ಪ್ರಶ್ನಿಸಿದ್ದೆ. ಪಾಪ! my sympathies.
ಮಥ್ತೂರರಾದರೆ ಹೊಗಳಿದುದರಲ್ಲಿ ಏನೂ ಆಶ್ಚರ್ಯವಿಲ್ಲ (professional jealousy!). ಆದರೆ, ನೀವೂ ಅವರೂ ವೆಂ.ರಾಯ ಭಾರತೀಪ್ರಿಯರೂ ಒಂದು ‘ಪಾಳಿ’ ಎಂದು ತಿಳಿದು ಅಚ್ಚರಿಯಾಗಿರ್ಪುದು. ಹಾಗಾದರೆ ಇನ್ನೊಂದರಲ್ಲಿ ಅನಂತಸುಬ್ಬರಾಯರು ಅರ್ಚಿಕರಾಗಿ ದಾನಿಯಾದರೆ? (ಬೇರಾರು ಇದ್ದಾರೆ?). ಶ್ರೀ ಕಲ್ಕಿಯವರಿಗೆ ಕರೆನಾಡ ಕನ್ನಡಿಗನ ‘ವಣಕ್ಕಂ’ ಒಂದು ಹೇಳಿಬಿಡಿ - ಮರೆಯದೆ ಮತ್ತೆ. Better luck next timeನ ವಿಷಯ ಇಲ್ಲಿಯ ರಾಜಕೀಯದಲ್ಲಿ, next time ಅದು ನನ್ನ ಕೈಗೆ ಸಿಗುವುದೋ ಇಲ್ಲವೊ! ಈಗಾಗಲೇ ಅದು ಬಹಳ ಸುಲಭ ಕೆಲಸವೆಂದುಕೊಂಡು aspire ಮಾಡುತ್ತಿರುವ candidates (ಕ್ಯಾಂಡಿ ಡೇಟ್ಸ್)ಗಳಿಗೇನೂ ಕಡಿಮೆ ಇಲ್ಲ. ಅದು ಹೊರಟು ಹೋದರೆ ನನಗೇನೂ regrets ಇಲ್ಲವೆನ್ನಿ.
ನಿಮ್ಮ 'd' class implementationನ ನಿರೂಪಣೆ ನೋಡಿದರೆ, ಎಲ್ಲಿ ಕಾಫಿ ಕೊಡಬೇಕಾಗುವುದೋ ಎಂಬ ಭಯದಿಂದ report ಮಾಡಿದ ಹಾಗೆನಿಸುತ್ತಿದೆ. ನಿಮಗೂ ವರ್ಷ ತುಂಬಿರಬೇಕಲ್ಲ? ಅಥವಾ ಇನ್ನೂ ತಿಂಗಳುಗಳಲ್ಲೇ ಇದ್ದೀರಾ? (ಇರಲಾರದು. ನೀವೂ preliminary recruitment cadreಗೆ ಸೇರಿದವರು ತಾನೆ?) ಇರಲಿ, ಹೇಗಿದ್ದರೂ ಬೆಂಗಳೂರಿಗೆ ಬಂದಾಗ ವಸೂಲು ಮಾಡಿಯೇ ಮಾಡುತ್ತೇನೆ. ಅಥವಾ ನೀವಿಲ್ಲಿ ಬಂದಾಗ ಒಂದು ದಿನ - ಮಂಗಳೂರು MTR ಎನಿಸಿದ ‘ಮೋಹಿನಿ ವಿಲಾಸ’ದಲ್ಲಿ ಕೊಡಿಸಿ. ಆದರೆ, Bill 400% ಹೆಚ್ಚಾಗಬಹುದು (ನಾಲ್ಕು ಜನರಾಗುವ ಕಾರಣ). ನಿಮ್ಮ hope (for the better) materialise ಆಗಲಿ ಎಂದು ನಾನೂ ಹಾರೈಸುತ್ತಿದ್ದೇನೆ. ಏಕೆಂದರೆ, ಅದೊಂದು chain publication experiment fail ಆದರೆ ಶ್ರೀ S.V. (V.S. ಅಲ್ಲ) Kudva ಅವರ ದ್ವೈವಾರ್ಷಿಕ ಯೋಜನೆಯೂ ತಲೆಕೆಳಗಾಗಬಹುದು. ಏಕವರ್ಷವಾಗಿದ್ದುದು ಮತ್ತೂ ಒಂದು ವರ್ಷ ಮುಂದುವರಿಯಲು ನಿಮ್ಮ ‘ರಾಯ’ರೇ ಕಾರಣರೆಂಬೊಂದು ಸುದ್ದಿ ಇರುವುದಾಗಿ ತಿಳಿದು ಬಂದಿದೆ.
ಗೃಹಶೋಧನೆ ಈಗ ಒಂದು ಹಂತಕ್ಕೆ ಮುಟ್ಟಿದೆ. ಎಲ್ಲರ ನಸೀಬೂ ಸರಿಯಾಗಿದ್ದರೆ ಇದ್ದಕ್ಕಿದ್ದ ಹಾಗೆ ಒಂದು p.c. ನಿಮ್ಮ ಕೈಸೇರಲೂ ಬಹುದು. ಒಬ್ಬನ ಕೈಗೆ ರೊಕ್ಕವಂತೂ ಎಣಿಸಿದ್ದೇನೆ. ಅವನು ಕೊಟ್ಟರೇ ಸರಿ - ಇಲ್ಲವಾದರೆ ಹಣವಾದರೂ ಮರಳಿ ಬರುತ್ತದೆ. ಮನೆ ದೊರೆತರೆ ಆಯಿತಲ್ಲಾ ----
ಆದರೆ, ಷರತ್ತಿನಿಂದ ಹಿಂದೆಗೆಯುವುದಿಲ್ಲ, ಖಂಡಿತವಾಗಿಯೂ! ವಿಧಾನಸೌಧ ತೋರಿಸದಿದ್ದರೇನಂತೆ ...... (ಎಂದಾದರೂ ನೋಡಬಹುದು) ಕಾಣಿಸಬಾರದೆ? ಒಂದೊಂದು ಬಾರಿ ಇಲ್ಲಿನ ಸೆಕೆಯನುಭವಿಸಲೇಬೇಕು. "ನಮ್ಮ ಬೆಂಗ್ಳೂರೇ ವಾಸಿ ಅಲ್ಲವೇನ್ರೀ ..." ಎನಿಸಿಕೊಳ್ಳಬೇಕು. "ಜಗಲಿ ಹಾರದೆ ಇದ್ದರೂ ಗಗನ ಹಾರಲಾಗದೆ?" TTK (ಉರ್ಫ್ ಮೊರಾರ್ಜಿ) ಕೃಪೆಯೂ ’pagoda' ನೋಡುವ ಹಟ ಮೂಡಿದಾಗ ಆಗಬಹುದು. ಅಷ್ಟು ಸಾವಿರ ತಾಪತ್ರಯವಿದ್ದ K.A.S.ರಾಯರೇ ಕರಾವಳಿ ಯಾತ್ರೆ ಮಾಡಿದ್ದರಂತೆ, ಅವರಷ್ಟೇ ತಾತ್ರಯಗಳಿರುವ ನಾಗೇಶರಾಯರಿಗೇಕೆ ಸಾಧ್ಯವಾಗಬಾರದು? ಮರೆತೆ, ನೀವಂತೂ ಬರುವ ಸೂಚನೆ ಕೊಟ್ಟಿದ್ದೀರಲ್ಲ, ಇನ್ನೇಕೆ ‘ಶೆಟ್ಟರ ಒತ್ತಾಯ?’ ಕಾರ್ಡಿನ ನಿರೀಕ್ಷೆಯಲ್ಲಿರಿ.
ಇಲ್ಲಿಗೆ, I am nearing the end ಎನ್ನಬಹುದು. ಆದರೆ ಇನ್ನೂ ಒಂದು sheet ಬಾಕಿ ಇದ್ದು, ಕೇಳುವ ಒಂದು ಮಾತಿದೆ. ಆದ್ದರಿಂದ, ಕೈ ಸೋಲುತ್ತಿದ್ದರೂ ಕೇಳಿ ಬಿಡುವೆ.
‘ರಾಮೇಶ್ವರದಿಂದ ಕನ್ಯಾಕುಮಾರಿ’ ಎಂದಿರಿ. ಅದೇನು slip of ...... ಗೆ? ಅಥವಾ deliberate ಎಂದಾದರೆ, ಅಲ್ಲಿನ humour catchiಸಲು ಸಾಧ್ಯವಾಗಲಿಲ್ಲ. ತಿಳಿಸುತ್ತೀರಾ?
ನಮ್ಮಲ್ಲಿನ ಅಧಿಕೃತ ಭಾಷೆ - ಮೇಲ್ಮಟ್ಟದ ಅಧಿಕಾರಿ ವರ್ಗದಲ್ಲಿ (administrative) ಕೊಂಕಣಿ. Interdepartmental ಮಟ್ಟದಲ್ಲಿ: ಇಂಗ್ಲಿಷ್. Editorialನಲ್ಲಿ ಕನ್ನಡ. Ed. Deptನ ಕೆಲವು membersನೊಳಗೆ: ತುಳು. ನವಭಾರತ ಮತ್ತು local PTIಗಳೊಳಗೆ: ಮಲೆಯಾಳ. ಹಾಗಿರುವ ಪಂಚಭಾಷಾ ಪ್ರದೇಶ - ಈ newspaper publisher's (P) Ltd. ಅದೇಕೆ ಕೇಳಿದಿರಿ? ವಿಶೇಷವೇನಾದರೂ ಇತ್ತೆ?
ಇನ್ನೇನು ಬರೆಯಲೀಗ? ಇಂದು ಇಂದಿರಾ ಪ್ರಿಯದರ್ಶಿನಿಯನ್ನು ಇನ್ನೊಂದು ಬಾರಿ HK ವೀರಣ್ಣಗೌಡರ ಪಕ್ಕದಲ್ಲಿ ಕಂಡೆ. (ಪತ್ರಿಕಾ ಪ್ರತಿನಿಧಿಯಾಗಿಯಲ್ಲ - ಸಾರ್ವಜನಿಕನಾಗಿ). ಅದೇ matter - ಮೊದಲಿನ ಭಾಷಣಗಳದೇ stereo. ಆದರೆ, ‘ವ್ಹಾ ಬುಡ್ಢಿ, ಖೂಬ್‍ಸೂರತ್ ಹೈ’ ಎಂದೊಬ್ಬ ಸಾಬಿ ನುಡಿದ. ನಾನೂ ಮೌನಧ್ವನಿ ಕೂಡಿಸಿದೆ, ಆ ಮಾತಿಗೆ ತಪ್ಪೆ?
ಕಂಠೀರವನಿಗೆ ಶುಭಾಶಯಗಳನ್ನು ತಿಳಿಸುವ ಕೆಲಸವನ್ನು ನಾಡಿದ್ದು ಸೋಮವಾರ ಊರಿಗೆ ಅಂದರೆ - ಅಡ್ಯನಡ್ಕ ಎಂಬಲ್ಲಿಗೆ - ಹೋದಾಗ ಮಾಡುತ್ತೇನೆ, ಆಗದೆ?
ನನ್ನ pages ಪೂರ್ತಿಯಾಯಿತು. (ಕೊನೆಗೆ double leads ಮಾಡಿದ್ದೇನೆ - ಇರಲಿ.) ನಿಮ್ಮ ಕಾಲಂ ಬರುವುದು ಯಾವಾಗ?
ಕ್ಷೇಮ ತಾನೆ?
ನಿಮ್ಮ,
ಪಗೋ27/11
ಕೊನೆಯ ಒಂದು ಸಂದೇಹ:
ಈ ರೀತಿಯಾಗಿ ಬಂದು ತೆಳು ಕಾಗದದ ಪತ್ರಗಳನ್ನು (ಓದದಿದ್ದರೂ) ನೋಡಿ, ಶ್ರೀಮತಿ ನಾಗೇಶರಾಯರು ಸಂದೇಹಗ್ರಸ್ತರಾಗಲಾರರಷ್ಟೆ?
ಪಗೋ

----

No comments: