ಸುದ್ದಿಜೀವಿ

ಸುದ್ದಿಜೀವಿ
ನಾಗೇಶರಾವ್

Wednesday, April 01, 2009

ಪತ್ರಿಕೋದ್ಯಮವಲ್ಲ, ನಮ್ಮದು ‘ಕತ್ರಿಕೋದ್ಯಮ’!
- ಸುದ್ದಿಜೀವಿ
ಪತ್ರಿಕೋದ್ಯಮ ಒಂದು ರೀತಿಯ ‘ಕತ್ರಿ-(ಕತ್ತರಿ)ಕೋದ್ಯಮ’ವೇ ಸರಿ. ಎಲ್ಲದರ ಮೇಲೂ ಕತ್ತರಿ ಆಡಿಸುವುದು - ಸುದ್ದಿ, ವರದಿ, ಹೇಳಿಕೆ, ಭಾಷಣ, ಉಪನ್ಯಾಸ, ಪ್ರಬಂಧ, ಕೊನೆಗೆ ಕತೆ-ಕವಿತೆಗಳಿಗೂ ಸಹ! ಈಗಂತೂ ನ್ಯೂಸ್‍ಪ್ರಿಂಟ್ ಕೊರತೆಯ ನೆಪದಲ್ಲಿ ಪತ್ರಿಕೆಗಳ ಗಾತ್ರ ಬೆನ್ನಿಗೆ ಹತ್ತಿಹೋಗಿರುವುದರಿಂದ [ಮೂವತ್ನಾಲ್ಕು ವರ್ಷಗಳ ಹಿಂದಿನ ಮಾತು - ಸಂ.] ಈ ಕತ್ತರಿಪ್ರಯೋಗದಲ್ಲಿ ಹೆಚ್ಚಿಗೆ ಸಾಫಲ್ಯ ಪಡೆದವರೇ ಯಶಸ್ವಿ ಪತ್ರಿಕೋದ್ಯಮಿಗಳೆನಿಸಿಕೊಂಡಾರು. ಉಪಸಂಪಾದಕರಿಗೀಗ ಚುರುಕು ಲೇಖನಿ ಬೇಕಾಗಿಲ್ಲ - ಹರಿತ ಕತ್ತರಿ (ಅರ್ಥಾತ್ ಕತ್ತರಿ ಗುರುತು ಹಾಕುವ ಬಣ್ಣದ ಪೆನ್ಸಿಲ್) ಇದ್ದರೇ ಸಾಕು!
ಸಣ್ಣಪುಟ್ಟ ಸಾರ್ವಜನಿಕ ಸಭೆಯಿಂದ ಹಿಡಿದು ಸಂಸದಧಿವೇಶನಗಳವರೆಗೆ ಕಾರ್ಯಕಲಾಪಗಳ ಪ್ರಲಾಪ ಪ್ರಕಟಿಸಬೇಕಾದಾಗ ಈ "ಪತ್ರಿಕಾ ಕತ್ತರಿ" ನೇರವಾಗಿ, ನೀಳವಾಗಿ, ಅಂಕುಡೊಂಕಾಗಿ, ಗುಂಡಗೆ, ಸೊತ್ತಗೆ ಎಲ್ಲಾ ರೀತಿಯಲ್ಲೂ ತನ್ನ ಕಟಾವು ಕೌಶಲ್ಯ ನಡೆಸಬೇಕಾಗುತ್ತದೆ. ಈ ಕತ್ತರಿ ಪ್ರಯೋಗ ಮಾಡುವಾಗ ಸಭೆಯಲ್ಲಿ ಭಾಗವಹಿಸಿದವರೆಲ್ಲರಿಗೂ ನ್ಯಾಯ ದೊರಕಿಸುವುದು ಸಾಧ್ಯವೇ ಇಲ್ಲ; ನಮ್ಮ ರಾಜಕಾರಣಿಗಳು ಹೇಳುವ ಹಾಗೆ "ಸಾಮಾಜಿಕ ನ್ಯಾಯ" ದೊರಕಿಸಲು ಮಾತ್ರ ಯತ್ನಿಸಬೇಕು, ಅಷ್ಟೆ. ಹೀಗಿರುವಾಗ ಸಾಧಾರಣ ಸಭೆಗಳ ಸಂಚಾಲಕರು, ಉದ್ಘಾಟಕರು, ಉಪನ್ಯಾಸಕರಂತೂ ತಮ ತಮಗೆ ಅಪಚಾರವಾಯಿತೆಂದು ಕೆರಳುತ್ತಾರೆ; ಸ್ವಾಗತ ಮಾಡಿದವರು ಪ್ರಾರ್ಥನೆ ಗೀತೆಗಳನ್ನು ಹಾಡಿದವರು, ಟೇಪು-ಸನಿಕೆ, ಅಸ್ತಿಭಾರ ಶಿಲೆ ಹಿಡಿದವರು, ಆರತಿ ಬೆಳಗಿದವರು, ಆಭಾರ ಮನ್ನಿಸಿದವರು, ಆ-ಭಾರ ಈ-ಭಾರ ಹೊತ್ತವರು ಎಲ್ಲಾ ತಂತಮ್ಮ ಹೆಸರೂ ಸಹ ಬರಲಿಲ್ಲವೆಂದು ಕನಲುತ್ತಾರೆ. ಚರ್ಚಾಕೂಟ, ವಿಚಾರ ಸಂಕಿರಣ, ವಿದ್ವದ್ಗೋಷ್ಠಿಗಳನ್ನು ನಡೆಸಿದವರು, ಅದನ್ನು ಉದ್ಘಾಟಿಸಲು ಬಂದ ಮಂತ್ರಿ ಮಾನ್ಯರ ಅಪಲಾಪ ಮಾತ್ರ ಅಚ್ಚಾಗಿ, ಆ ಕೂಟಗಳ ನಿಜ ಕಲಾಪವೇ ವರದಿಯಾಗಲಿಲ್ಲವೆಂದು ಹಲಬುತ್ತಾರೆ.
ಇನ್ನು ವಿಧಾನಮಂಡಲ - ಸಂಸದಧಿವೇಶನಗಳಲ್ಲಾದರೋ ಬರೀ ಚಕಮಕಿ - ಸಭಾತ್ಯಾಗ, ಖಂಡನೆ, ಭತ್ಸ೯ನೆ, ಆಕ್ಷೇಪ - ಆರೋಪ, ಸವಾಲು - ಘೇರಾವ್‍ಗಳ ಮಸಾಲೆ ಸುದ್ದಿಗಳು ಮಾತ್ರ ಪ್ರಕಟವಾಗಿ, ವಾಸ್ತವಿಕ ವಿಧಾಯಕ ಕಾರ್ಯಕ್ರಮಗಳ ವರದಿ ಮೂಲೆಗುಂಪಾಗುವುದು ಸಾಮಾನ್ಯ. ಆಗೊಮ್ಮೆ ಈಗೊಮ್ಮೆ ಮಂತ್ರಿಗಳ ಮತ್ತಿತರ ನಾಯಕರ ಮಹತ್ವದ ಘೋಷಣೆಗಳು ಬೆಳಕು ಕಂಡರೂ ಅವು ನಮ್ಮ ಓದುಗರಿಗೂ ಅಷ್ಟಾಗಿ ಬೇಡ.
ಮಾತು ನುಂಗುವ ಜನರಾಜಕೀಯ ಮುಖಂಡರ ಹೇಳಿಕೆ - ಪ್ರತಿಭಟನೆ ಪ್ರತಿಪಾದನೆಗಳ ವರದಿಗಳ ಪೊದೆಯಲ್ಲಂತೂ ಕತ್ತರಿ ಧಾರಾಳವಾಗಿ, ಹರಿತವಾಗಿ ತನ್ನ "ಚಕ್-ಚಕ್" ಕೆಲಸ ಮಾಡುತ್ತದೆ. ತಮ್ಮ ಹೇಳಿಕೆಯ ಮುಖ್ಯಾಂಶ ಬರಲಿಲ್ಲವೆಂದೋ, ಮೇಲುಗಡೆಯೇ ಕಾಣಿಸಿಕೊಳ್ಳಲಿಲ್ಲವೆಂದೋ, ದೊಡ್ಡ ಶಿರೋನಾಮೆ ದೊರಕದೆ ಹೋಯಿತೆಂದೋ ಈ ಮಹನೀಯರ ಸರ್ವಕಾಲಿಕ ಆಕ್ಷೇಪ; ಮೊಟಕುಗೊಳಿಸುವಾಗ ಮೂಲಭಾವನೆಗೇ ಕುಂದು ಬಂದಿದೆ; ಸಂಕ್ಷೇಪ ಮಾಡುವಾಗ, ತಮ್ಮ ಅಭಿಪ್ರಾಯವನ್ನೇ ಅಪಭ್ರಂಶಗೊಳಿಸಿದ್ದಾರೆ ಎಂಬ ಟೀಕೆ, ಅದನ್ನು ಅಚ್ಚುಕಟ್ಟುಗೊಳಿಸಲು ತಮ್ಮ ತಲೆಕೆಡಿಸಿಕೊಂಡ ಪಾಪಿ ಪತ್ರಿಕೋದ್ಯಮಿಗಳಿಗೆ ಸದಾ ಕಟ್ಟಿಟ್ಟ ಬುತ್ತಿ. ಆತುರವಾಗಿ, ವಿವೇಚನೆಯಿಲ್ಲದೆ, ಸಂದಿಗ್ಧವಾಗಿ ಇಲ್ಲವೇ ವಿನಾಕಾರಣ ವಿವಾದಗ್ರಸ್ತ ಹೇಳಿಕೆಕೊಟ್ಟು ಶಿಸ್ತನ್ನೋ ಸಂಪ್ರದಾಯವನ್ನೋ ಮುರಿದು, ತಮ್ಮ ಅಥವಾ ವಿರೋಧೀ ಪಕ್ಷಗಳ ವಾಗ್ಬಾಣಕ್ಕೆ ತುತ್ತಾಗುವಂತಹ ಉಪದ್ವಾಪಿ ಮಹನೀಯರಿಗಂತೂ ಈ "ಕತ್ರಿಕೋದ್ಯಮ" ಸುಲಭವಾಗಿ ನುಣಚಿಕೊಳ್ಳುವ ದಾರಿಯಾಗುತ್ತದೆ. ತಮ್ಮ ವರದಿ ಪೂರ್ಣವಾಗಿ ಅಚ್ಚಾಗಿಲ್ಲ, ತಾವು ಹೇಳಿದ ವಾಕ್ಯಗಳನ್ನು ಅಪಾರ್ಥಕ್ಕೆ ಎಡೆಮಾಡಿಕೊಡುವಂತೆ ಜೋಡಿಸಿದ್ದಾರೆ, ತಾವು ಈ ರೀತಿ ನುಡಿಯಲೇ ಇಲ್ಲ ಎಂದು ಹೇಳಿಕೊಂಡು ಈ ಮಾತುನುಂಗುವ ಜನ ಪಾರಾಗುತ್ತಾರೆ; ತುಂಬಾ ವಿಕೋಪಕ್ಕೆ ಹೋಗುವಂತಹ ಪ್ರಸಂಗಗಳಲ್ಲಂತೂ ಕಟಾವು ಮಾಡಿದ ಪತ್ರಿಕೋದ್ಯಮಿಯನ್ನೇ ಕತ್ತರಿಗೆ ಸಿಕ್ಕಿಹಾಕಿಸಲು ಯತ್ನಿಸುತ್ತಾರೆ.
ಹೇಳುವುದು ಸುಲಭಆದರೆ ಈ ಕತ್ತರಿ ಆಡಿಸುವ ಕೆಲಸ ಭಾವಿಸಿದಷ್ಟು ಸುಲಭವಲ್ಲ; ಹೇಳುವುದು ಸುಲಭ, ಮಾಡುವುದು ಕಷ್ಟ. ಸಾಮಾನ್ಯವಾಗಿ ಸಂಪಾದಕರೋ ಅವರ ಸಹಾಯಕರೋ, ಯಾವುದೇ ವರದಿ ವಿಷಯವನ್ನಾಗಲೀ "ಕಂಡೆನ್ಸ್ ಮಾಡಿಬಿಡಿ; ಎಲ್ಲಾ ಎರಡೆರಡು ಸಾಲು ಕೊಟ್ಟುಬಿಡಿ; ಎಸೆನ್ಸ್ ಕೊಟ್ಟರೆ ಸಾಕು" ಎಂಬಂತಹ ಹ್ರಸ್ವವಾದ ಸರ್ವಗ್ರಾಹಿ ಸೂಚನೆ ಕೊಟ್ಟುಬಿಡುತ್ತಾರೆ! ಆದರೆ ಕತ್ತರಿಯನ್ನು ಎಲ್ಲಿಂದ ಎಲ್ಲಿಗೆ, ಯಾರಿಂದ ಯಾರಿಗೆ, ಹೇಗೆ ಹೇಗೆ ಆಡಿಸಬೇಕೆಂಬುದೇ ಕಷ್ಟನಿರ್ಧಾರದ ಬೈಸಿಕೊಳ್ಳುವ ಕೆಲಸ. ಅದರಲ್ಲೂ ಹಳ್ಳಿಗಾಡಿನ ಸುದ್ದಿಗಳಲ್ಲಂತೂ, ಅಧ್ಯಕ್ಷತೆವಹಿಸಿದ್ದವನಿಂದ ಹಿಡಿದು ಚಾಪೆ ಸುತ್ತಿದವನವರೆಗೆ ಪ್ರತಿಯೊಬ್ಬನ ಹೆಸರೂ ಸಭಾ ಸಮಾರಂಭಗಳ ವರದಿಗಳಲ್ಲಿ ಬರಲೇ ಬೇಕು (ಇಲ್ಲದಿದ್ದರೆ ಆ ಚಂದಾದಾರರು ನಿಮ್ಮ ಪತ್ರಿಕೆ ಬೇಡವೆಂದು ನಿಲ್ಲಿಸಿಬಿಡುವರೆಂಬ ಏಜೆಂಟರ ತೂಗುಗತ್ತಿ!); ಇನ್ನು ಮುಖ್ಯ ಅತಿಥಿಗಳ ಭಾಷಣಗಳೂ, ಹುಚ್ಚುಚ್ಚಾರಗಳೂ ಚೆನ್ನಾಗಿ "ದಪ್ಪ ದಪ್ಪ ಅಕ್ಷರಗಳಲ್ಲೇ ಮೊದಲ ಪುಟದಲ್ಲೇ" ಅಚ್ಚಾಗಬೇಕೆಂದು ಆಯಾ ಸುದ್ದಿಗಾರರ ಆಗ್ರಹ! ಇಂತಹ ಸಂಕಟದಲ್ಲಿ ಸಿಕ್ಕ ಉಪಸಂಪಾದಕ ಎರಡು ಸಾಲಿನಲ್ಲಿ ಹೋಗಲಿ; ಎರಡು ಪ್ಯಾರಾಗಳಲ್ಲಾದರೂ ಆ ವಿಷಯ ಪ್ರಕಟಿಸಲು ಸಾಧ್ಯವೆ? ಹಾಗೆಂದು ಪತಿಯೊಂದು ಊರಿನ ಪ್ರತಿಯೊಂದು ವರದಿಯನ್ನೂ ಅರ್ಧ ಮುಕ್ಕಾಲು ಕಾಲಂ ಕೊಟ್ಟು ತೃಪ್ತಿಪಡಿಸಲು ಪತ್ರಿಕೆಯೇನು ಅಕ್ಷಯವಸ್ತ್ರವೆ? ಅದನ್ನು ಹಗಲಿರುಳೂ ಅರಿತೂ ಸಹ, ಸಂಬಂಧಪಟ್ಟ ಏಜೆಂಟ್-ಸುದ್ದಿಗಾರನಿಂದ ಆಕ್ಷೇಪಣೆ ಬಂದಾಗ ಮಾತ್ರ ಸಂಪಾದಕ ಮುಖ್ಯಸ್ಥರು, ಉಪಸಂಪಾದಕರನ್ನು "ಮುಖ್ಯಾಂಶಗಳಿಗೆ ಹೇಗಾದರೂ ಎಡೆ ಮಾಡಿಕೊಡಬೇಕಿತ್ತು" ಎಂಬ ಹಾರಿಕೆಯ ವಾಗ್ದಂಡನೆಗೆ ಗುರಿಪಡಿಸುವುದು ಎಂದಾದರೂ ನಿಂತಿದೆಯೆ?!
ಯಮಸಾಹಸಬದುಕಿದ ಗಣ್ಯರ ಓಡಾಟ-ಚಟುವಟಿಕೆಗಳೆಲ್ಲಾ ಪ್ರಕಟವಾಗಬೇಕು; ಸತ್ತವರ ಚರಿತ್ರೆ, ಮಕ್ಕಳು, ನೆಂಟರು, ಅವರು ಮಾಡಿದ-ಮಾಡದೆ ಹೋದ-ಹಾಗೂ ಮಾಡಬೇಕೆಂದು ಬಯಸಿದ್ದ ಸೇವಾ ಚಟುವಟಿಕೆಗಳೂ, ಔದಾರ್ಯ ಗುಣಗಳೂ ಬೆಳಕುಕಾಣಬೇಕು; ಅವರ ಬಗ್ಗೆ ಸಂತಾಪ ಸೂಚಿಸಿದವರೆಲ್ಲರ ಮೊಸಳೆ ಕಣ್ಣೀರೂ ಹರಿಯಬೇಕು. ಇತರ ಅಭಿನಂದನಾ ಸಭೆ - ಅಭಿನಿಂದನಾ ಸಭೆ ಇವುಗಳ ವಿವರಗಳೂ, ಸಾಧ್ಯವಾದರೆ ಭಾಷಣಕಾರರ ಚಿತ್ರ ಸಮೇತ ವಿಜೃಂಭಿಸಬೇಕು. ಹೀಗೆ ಪ್ರಕಟನಾತುರರ ಉತ್ಸಾಹ-ಉದ್ವೇಗ-ಉನ್ಮಾದಗಳನ್ನು ತಣಿಸುವುದು ಕತ್ರಿಕೋದ್ಯಮಿಗಳಿಗೆ ಯಮಸಾಹಸವೇ ಸೈ!
ಪತ್ರಿಕಾ ಕಚೇರಿಗೆ ದಿನಂಪ್ರತಿ ತುಂಬುವ ವರದಿ ರಾಶಿಯಲ್ಲಿ ಬಹುತೇಕ ನಿಸ್ಸಾರ - ನಿಷ್ಪ್ರಯೋಜಕ ಕಸ. ಅವನ್ನೆಲ್ಲಾ ಕಸಿವಿಸಿಯಿಂದ ಝಾಡಿಸಿ, ಉಪಯುಕ್ತವೆನಿಸಿದುದನ್ನೇ ಜೋಪಾನವಾಗಿ ಜೋಡಿಸಿ, ಯುಕ್ತವಾಗಿ ಅಲಂಕಾರಗೊಳಿಸಿ, ಮುದ್ರಣಕ್ಕೆ ಅಳವಡಿಸುವ ಈ ಕತ್ತರಿ - ಕರ್ತಾರನ ಅನುದಿನದ ಕಸರತ್ತು ಎಂತಹ "ಪರಮವೀರ ಚಕ್ರ" ಸಾಹಸಗಳಿಗೂ ಸಾಟಿಯಾಗಬಲ್ಲದು. ಅದನ್ನು ಇನ್ನೂ ವಿವರಿಸುತ್ತಾ ಹೋಗೋಣವೆಂದರೆ, ಈ ವಿಶೇಷ ಸಂಚಿಕೆಯ ಸಂಪಾದಕೀಯ ಹೊಣೆ ಹೊತ್ತವರ ಕೈಯಲ್ಲೂ ಭರ್ಜರಿ ಕತ್ತರಿ ಇರಲೇ ಬೇಕಲ್ಲವೆ?!.....
ಅಂತೂ, ಕೊಟ್ಟಿದ್ದಕ್ಕೂ ಬೈಸಿಕೋ, ಬಿಟ್ಟಿದ್ದಕ್ಕೂ ಬೈಸಿಕೋ!-- ಜೈ ಕತ್ರಿಕೋದ್ಯಮಿ!!
[ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು 1975ರಲ್ಲಿ ನಡೆಸಿದ ರಾಜ್ಯ ಸಮ್ಮೇಳನದ (ಮಂಡ್ಯ) ಸ್ಮರಣ ಸಂಚಿಕೆಗೆ ಅಂದು ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಸುದ್ದಿ ಸಂಪಾದಕರಾಗಿದ್ದ ಹೆಚ್.ಆರ್.ನಾಗೇಶ ರಾವ್ ಬರೆದ ಲೇಖನ.]

No comments: