ಸುದ್ದಿಜೀವಿ

ಸುದ್ದಿಜೀವಿ
ನಾಗೇಶರಾವ್

Thursday, May 31, 2007



ವಿಮರ್ಶಾ ಪ್ರಚೋದನೆಯಿಂದ ಬರೆದ


`ಸಾಹಿತ್ಯ ಮತ್ತು ಕಾಮ ಪ್ರಚೋದನೆ!


(ಲೇಖಕರು: ಶ್ರೀ ಅ.ನ. ಕೃಷ್ಣರಾಯರು, ಪ್ರಕಾಶಕರು: ವಾಹಿನಿ ಪ್ರಕಾಶನ,ಜಯಚಾಮರಾಜ ರಸ್ತೆ, ಬೆಂಗಳೂರು - ೨,
ಬೆಲೆ ರೂ.೩-೦-೦)
ಕರ್ನಾಟಕದ ಪ್ರಖ್ಯಾತ ಲೇಖಕರಾದ ಶ್ರೀ ಅ.ನ. ಕೃಷ್ಣರಾಯರು ಇತ್ತೀಚೆಗೆ ಪ್ರಕಟಿಸಿದ ಹಲವು ಕಾದಂಬರಿಗಳ ಮೇಲೆ ಕೆಲವು ವ್ಯಕ್ತಿಗಳೂ, ವಿಮರ್ಶಕರೂ, ಸಾಹಿತಿಗಳೂ, ಸಂಸ್ಥೆಗಳೂ ಮತ್ತು ಪತ್ರಿಕೆಗಳೂ ಪ್ರಕಟಿಸಿದ ಕಟು ವಿಮರ್ಶೆಗಳಿಂದ ಪ್ರಚೋದಿತರಾಗಿ ಶ್ರೀ ಕೃಷ್ಣರಾಯರು ಪ್ರಕಟಿಸಿರುವ ಉತ್ತರ ರೂಪದ ಪುಸ್ತಕವೇ ಈ "ಸಾಹಿತ್ಯ ಮತ್ತು ಕಾಮ ಪ್ರಚೋದನೆ". ಸ್ವಕೀಯ ಹಿನ್ನೆಲೆ-ಪ್ರಸ್ತಾಪಗಳಿಲ್ಲದೇ ಈ ಪುಸ್ತಕವು ಬಂದಿದ್ದರೆ ಅದನ್ನು ಕನ್ನಡ ಸಾಹಿತ್ಯದ ಒಂದು ಪ್ರಮುಖ ಮುಖದ ಉಪಯುಕ್ತ ಸಂಶೋಧನಾ ಗ್ರಂಥವೆನ್ನಬಹುದಾಗಿತ್ತು. ಕಹಿ ಮಾತುಗಳಿಲ್ಲದೇ ಈ ಪುಸ್ತಕ ಹೊರಬಂದಿದ್ದರೆ, ಶ್ರೀ ಅ.ನ. ಕೃಷ್ಣರಾಯರ ಟೀಕಾಕಾರರೂ ಕೂಡಾ ಅವರ ವಾದಸರಣಿಯನ್ನು ವಿರಸವಿಲ್ಲದೆ ಮನಸ್ಸಿಗೆ ತೆಗೆದುಕೊಳ್ಳಬಹುದಾಗಿತ್ತು. ಈ ವಿವರಣೆಯ ಹಿಂಬದಿಯಲ್ಲಿ ತಮ್ಮ ಹಿಂದಿನ ವಿಮರ್ಶೆಗಳನ್ನೇ ಪುನರ್ವಿಮರ್ಶೆ ಮಾಡುವ ಮನೋಪರಿವರ್ತನೆ ಕೂಡಾ ಆಗುತ್ತಿತ್ತೋ ಏನೋ! ಆದರೆ, ಎರಡೂ ಕಡೆಗಳಿಂದಲೂ ಬಂದಿರುವ ಅಸಹನೆಯ ಮಾತುಗಳು, ಕನ್ನಡ ಸಾಹಿತಿಗಳಿಗೇ ಆಗಲಿ ವಿಮರ್ಶಕರಿಗೇ ಆಗಲಿ ಭೂಷಣ ತರುವುದಿಲ್ಲ.
ಶ್ರೀ ಅ.ನ. ಕೃಷ್ಣರಾಯರು ಇಂದು ತಮ್ಮ ಟೀಕಾಕಾರರನ್ನು ದೂರುವ ಮೊದಲು, ಹಲವು ವರ್ಷಗಳ ಹಿಂದೆ ತಾವೇ ಇತರ ಸಾಹಿತಿಗಳ ಮೇಲೆ ಪ್ರಾರಂಭಿಸಿದ `ಪ್ರಗತಿಶೀಲ' ಚಳವಳಿಯ ದಿನಗಳನ್ನು ಸ್ಮರಣೆಗೆ ತೆಗೆದುಕೊಳ್ಳಬೇಕು. `ಪ್ರಗತಿ' ಅಥವಾ `ಪ್ರತಿಗಾಮಿ' ಎಂಬುದು ಹೆಸರು ಹಿಡಿದು ಕರೆದುಕೊಳ್ಳುವುದರಿಂದ ಆಗುವುದಿಲ್ಲ. `ಪ್ರಗತಿಶೀಲ ಸಾಹಿತಿ' ಎಂಬ ಹೆಸರನ್ನಿಟ್ಟುಕೊಂಡಾತನು ಬರೆದಿದ್ದೆಲ್ಲಾ ಪ್ರಗತಿಶೀಲವಾಗುವುದಿಲ್ಲ. ಈ ರೀತಿಯ ಭೇದ ವಿಂಗಡಣೆಗಳು ಕೋಮುವಾರು ವಿಂಗಡಣೆಗಳಿಗಿಂತಲೂ ಸಂಕುಚಿತವಾದವು, ಹುರುಳಿಲ್ಲದವು. ಪ್ರಗತಿಶೀಲರಾಗ ಬಯಸುವ ಪ್ರತಿಯೊಬ್ಬರೂ ಈ ಮಾತನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಶ್ರೀ ಅ.ನ. ಕೃಷ್ಣರಾಯರ ಈ ವಿಮರ್ಶಾ ಗ್ರಂಥಕ್ಕೆ ಕಾರಣವಾಗಿರುವ ಖಂಡನೆಗಳು, ಅವರ ದೃಷ್ಟಿಯಲ್ಲಿ ಪ್ರಗತಿಶೀಲವಲ್ಲವೆಂದು ಕಂಡುಬಂದಿದ್ದಂತಹ ಸಾಹಿತಿ ವ್ಯಕ್ತಿಗಳಿಂದ ಬಂದಿರುವುದಕ್ಕಿಂತಲೂ ಹೆಚ್ಚಾಗಿ, ಅವರ ರೀತಿಯಲ್ಲೇ ಪಂಥೀಕರಣ ವಿಂಗಡಣೆ ಮಾಡುತ್ತಿರುವವರಿಂದಲೇ ಬಂದಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ಈ ಟೀಕಾಕಾರರು ಶ್ರೀ ಕೃಷ್ಣರಾಯರಿಗಿಂತ ತಾವು ಪುರೋಗಾಮಿಗಳೆಂದು ಭಾವಿಸಿಕೊಂಡಿದ್ದಾರೆ. ಆದರೆ ಈ ಬಗೆಯ ಸಾಹಿತ್ಯದಲ್ಲಿನ `ಪ್ರಗತಿಶೀಲತೆ - ಪುರೋಗಾಮಿತನಗಳ' ಸ್ಫರ್ಧೆಯಿಂದಾದ ವೈಷಮ್ಯಪೂರಿತ ವಾಗ್ಯುದ್ಧ ಸಾಹಿತ್ಯದ ಬೆಳವಣಿಗೆಗೆ ಶ್ರೇಯಸ್ಕರವಲ್ಲ. ತಮ್ಮ ರೀತಿಯ ಪಂಥೀಯವಾದಿಗಳಿಂದಲೇ ಎದುರಿಸಲ್ಪಟ್ಟ ಮೇಲಾದರೂ ಶ್ರೀ ಅ.ನ. ಕೃಷ್ಣರಾಯರು `ಇದು ಬೇಕು - ಅದು ಬೇಡ ಎನ್ನುವುದಾಗಲೀ, ಇದು ಶ್ಲೀಲ - ಅದು ಅಶ್ಲೀಲವೆನ್ನುವುದಾಗಲಿ ಇಂದಿನ ಸಾಹಿತಿಯ, ಸಾಹಿತ್ಯ ಪ್ರೇಮಿಯ ಕೆಲಸವಲ್ಲ. ಕನ್ನಡದ ಬೆಳೆಯನ್ನು - ಅದು ಏನೇ ಆಗಿರಲಿ - ಹೆಚ್ಚಿಸಬೇಕಾದುದು ನಮ್ಮೆಲ್ಲರ ಕರ್ತವ್ಯ. ಜಳ್ಳನ್ನು ತೂರಿ ಕಾಳನ್ನು ಉಳಿಸಿಕೊಳ್ಳಬೇಕಾದುದು ನಮ್ಮ ಮುಂದಿನ ಪೀಳಿಗೆಯವರ ಕೆಲಸ. ಜರಡಿಯಾಡುವ ಕೆಲಸವನ್ನು ಕಾಲವೇ ನಿರ್ವಹಿಸುವಾಗ ನಾವು ತೊಂದರೆಪಟ್ಟುಕೊಳ್ಳಬೇಕಾದ ಅಗತ್ಯ ಇಲ್ಲ' ಎಂಬ ಸಿದ್ಧಾಂತಕ್ಕೆ (ಪುಟ ೨೯೩, ಉಪಸಂಹಾರ) ಬಂದಿರುವುದು ಸಮಾಧಾನಕರ ವಿಷಯ. ಈ ಸೂತ್ರವನ್ನು ನಮ್ಮ ಎಲ್ಲಾ ಬಗೆಯ ಸಾಹಿತಿಗಳೂ ವಿಮರ್ಶಕರೂ ಗ್ರಹಿಸಿ ನಡೆದಲ್ಲಿ ಸಾಹಿತ್ಯ ತಾನಾಗಿಯೇ ಮುನ್ನಡೆಯುವುದು. ತಲೆಚೀಟಿಯನ್ನು ಅಂಟಿಸುವ ಅವಶ್ಯವಿಲ್ಲದೆ ತಾನಾಗಿಯೇ ಪ್ರಗತಿಶೀಲ - ಪುರೋಗಾಮಿಯಾಗುವುದು.

ಸಾಹಿತ್ಯ ರಚಿಸುವುದು ಸಾಹಿತಿಯ ಕರ್ತವ್ಯ. ಅದನ್ನು ಓದುವುದು, ಬಿಡುವುದು, ಆರಿಸುವುದು, ವಿಂಗಡಿಸುವುದು ಓದುವ ಜನತೆಯ ಕರ್ತವ್ಯ. ಜನತೆಯು ತಮ ತಮಗೆ ಬೇಕಾದ ರೀತಿಯ ಸಾಹಿತ್ಯ ಗ್ರಂಥಗಳನ್ನು ಓದುತ್ತಾರೆ. ತಮ್ಮ ಅಭಿರುಚಿಗೆ ಸಲ್ಲದ ಅಥವಾ ಸೇರದ ಗ್ರಂಥಗಳನ್ನು ದೂರೀಕರಿಸುತ್ತಾರೆ. ಸಾಹಿತ್ಯ ನಿರ್ಮಾಣವು ಅಥವಾ ವಾಚನವು ಕೇವಲ ಅ.ನ. ಕೃಷ್ಣರಾಯರ ಅಥವಾ ಅವರ ಕಟು ಟೀಕೆಗೆ ಒಳಗಾಗಿರುವ ನಿರಂಜನರಿಗೆ ಮಾತ್ರ ಸೇರಿದ್ದಲ್ಲ, ಅಥವಾ ಅವರಿಬ್ಬರ ದೃಷ್ಟಿಯಲ್ಲೂ ಪ್ರತಿಗಾಮಿಗಳಾದಂತಹವರ ಗುತ್ತಿಗೆಯೂ ಅಲ್ಲ. ಪ್ರತಿಯೊಬ್ಬ ಸಾಹಿತಿಗೂ ಒಂದೊಂದು ಬಗೆಯ ಪ್ರಾವೀಣ್ಯ, ಗ್ರಂಥ ರಚನಾ ನೈಪುಣ್ಯ, ನಿರೂಪಣಾ ಚತುರತೆ, ವಿಶಿಷ್ಟ ಶೈಲಿಗಳಿವೆ. ತನಗೆ ಸರಿತೋರಿದ್ದನ್ನು ಆಯಾ ಸಾಹಿತಿ ನಿರ್ಮಿಸುತ್ತಾ ಹೋಗುವುದರಲ್ಲಿ ಯಾವ ಆತಂಕವೂ ಇರಬಾರದು. ಸಾಹಿತ್ಯದ ಸೆನ್ಸಾರ್‌ಷಿಪ್ಪನ್ನು ಸಾಹಿತಿಗಳೇ ತಮ್ಮ ಕೈಗೆ ತೆಗೆದುಕೊಳ್ಳುವುದನ್ನು ಬಿಟ್ಟು ಆ ಹಕ್ಕಿನ ನಿಜ ಅಧಿಕಾರಿಗಳಾದ ಜನಸಾಮಾನ್ಯರಿಗೇ ವಹಿಸಿಕೊಡಬೇಕು. ಜನತೆಯನ್ನು ಉದ್ಧಾರ ಮಾಡುವುದಕ್ಕಾಗಿ ಗ್ರಂಥಗಳನ್ನು ರಚಿಸುತ್ತೇವೆಂಬ ಘೋಷಣೆ - ಪ್ರಚಾರಗಳನ್ನು ಮಾಡಿಕೊಂಡು ಸಾಹಿತ್ಯ ರಚನೆಗೆ ಕೈಹಾಕುವುದು ನಿಲ್ಲಬೇಕು. ತನಗೆ ಹೊಳೆದ ಭಾವನೆಗಳನ್ನೂ ತತ್ವಗಳನ್ನೂ ತಿಳಿಸುವುದಷ್ಟೇ ತನ್ನ ಕೆಲಸ. ತನ್ನ ಕಲಾ ಚಾತುರ್‍ಯ ಹಾಗೂ ವೃತ್ತಿ, ಜನ ಮೆಚ್ಚಿದರೆ ಸಂತೋಷಾ, ಸಮಾಜವನ್ನು ತಿದ್ದುವುದಕ್ಕೆ ಅದರಿಂದ ಸಹಾಯವಾಗುವುದೆಂದು ಜನತೆಯೇ ಕಂಡುಕೊಂಡರೆ ತಾನು ಪಟ್ಟ ಶ್ರಮಕ್ಕೂ ಸಾರ್ಥಕ - ಎಂಬ ಸಮಾಧಾನ ಮನೋಭಾವ ಸಾಹಿತಿಗೆ ಬರಬೇಕು.

ಸಮಾಜದ ಯಾವುದೇ ಮುಖದ ವಾಸ್ತವ ಯಥಾರ್ಥ ಚಿತ್ರಣದಿಂದಲೇ ಸಮಾಜ ತಿದ್ದಲಾಗುವುದೋ ಇಲ್ಲವೋ ಹೇಳಲು ಸಾಧ್ಯವಿಲ್ಲ. ಯಥಾರ್ಥ ಚಿತ್ರಣ ಕೆಲವರ ಮನಸ್ಸಿನ ಮೇಲೆ ಪರಿಣಾಮ ಮಾಡಬಹುದು, ಕೆಲವರನ್ನು ತಿದ್ದಬಹುದು, ಮತ್ತೆ ಕೆಲವರನ್ನು ಕೆಡಿಸಲೂಬಹುದು. ಕೆಲವರ ದುಶ್ಚಾಳಿಗೆ ನಿರೋಧವಾಗಬಹುದು, ಕೆಲವರಿಗೆ ಪ್ರಚೋದಕವಾಗಬಹುದು. ಕೆಲವರು ಮನಸ್ಸಿನಲ್ಲಿ ಆನಂದಿಸಿ, ಹೊರಗಡೆ ವಿಪರೀತ ನೈತಿಕತೆಯನ್ನು ಪ್ರಕಟಿಸಬಹುದು. ಮತ್ತೆ ಕೆಲವರು `ಇಂಗ್ಲಿಷಿನಲ್ಲಾಗಿದ್ದರೆ ಪರವಾಗಿಲ್ಲ, ಕನ್ನಡದಲ್ಲಿ ಮಾತ್ರ ಸಲ್ಲದು' ಎಂಬ ರೀತಿಯ ತೆರೆಯನ್ನು ಎಳೆದರೂ ಎಳೆಯಬಹುದು. ಇನ್ನೂ ಅನೇಕರು ಅಂತಹ ಚಿತ್ರಗಳನ್ನೇ ಬಹಿಷ್ಕರಿಸಿದರೂ ಬಹಿಷ್ಕರಿಸಬಹುದು, ಓದುಗರ ಅಭಿರುಚಿ - ಸಂಸ್ಕೃತಿ ಮನೋಭಾವಗಳಿಗೆ ತಕ್ಕಂತೆ ಗ್ರಂಥಗಳೂ ಮೆಚ್ಚಲ್ಪಡುವುವು ಅಥವಾ ತಿರಸ್ಕರಿಸಲ್ಪಡುವುವು. ಆರ್ಥಿಕ ಪರಿಗಣನೆಯೊಂದಿಲ್ಲದಿದ್ದರೆ, ಸಾಹಿತಿ ತನ್ನ ಮೇಲಿನ ವಿಮರ್ಶೆಗಳಿಗೆ ಹೆದರದೆ, ನಿರಾತಂಕವಾಗಿರಬಹುದು. ವಿಮರ್ಶೆಗಳಿಗೆ ಬೆಲೆ ಕೊಡುವುದಾದರೆ ಪ್ರಶಂಸೆ, ಖಂಡನೆಗಳಿಗೆ ಮನಸೋಲಬಾರದು, ಹಾಗಿಲ್ಲದಿದ್ದರೆ ವಿಮರ್ಶೆಗಳನ್ನೇ ಬಯಸಬಾರದು. ಸಾಹಿತಿಗೆ ಪ್ರಿಯವಾಗುವಂತಹ ವಿಮರ್ಶೆಯನ್ನೇ ವಿಮರ್ಶಕರು ಕೊಡುತ್ತಾ ಹೋಗಬೇಕಾದರೆ, ವಿಮರ್ಶೆಗೆ ಅರ್ಥವಾದರೂ ಏನು?
* * * * * *
`ಸಾಹಿತ್ಯ ಮತ್ತು ಜೀವನ' ಎಂಬ ಮಾಲಿಕೆಯ ನಾಲ್ಕನೆಯ ಪುಸ್ತಕವೆಂದು ಪರಿಗಣಿಸಿ, `ಸಾಹಿತ್ಯ ಮತ್ತು ಕಾಮ ಪ್ರಚೋದನೆ'ಯನ್ನು ಪರಿಗಣಿಸುವುದಾದರೆ, ಇದೊಂದು ಶ್ರಮಸಾಧ್ಯವಾದ ಸಾಹಿತ್ಯ ಸಂಗ್ರಹವೆಂದೇ ಕರೆಯಬೇಕು. ಹಳೆಗನ್ನಡ - ಹೊಸಗನ್ನಡ ಸಾಹಿತ್ಯವನ್ನೆಲ್ಲಾ ಪರಿಶೋಧಿಸಿ ಶ್ರೀ ಅ.ನ. ಕೃಷ್ಣರಾಯರು ಕಾಮ ಪ್ರಚೋದನಾ ಪ್ರಸ್ತಾಪಗಳನ್ನೂ, ವರ್ಣನೆಗಳನ್ನೂ ಗದ್ಯ - ಪದ್ಯ - ನಾಟಕ - ಸಂಭಾಷಣೆಗಳಿಂದೆಲ್ಲಾ ಆಯ್ದು ಕೊಟ್ಟಿದ್ದಾರೆ, ಆರು ಪುಟಗಳ ತುಂಬಾ ಆಕ್ರಮಿಸಿರುವ ಪಟ್ಟಿಯಲ್ಲಿರುವ ಸುಮಾರು ೨೦೦ ಉಪಯುಕ್ತ ಇಂಗ್ಲಿಷ್, ಕನ್ನಡ, ತೆಲುಗು ಗ್ರಂಥಗಳನ್ನೆಲ್ಲಾ ಆಳವಾಗಿ ಪರಿಶೋಧಿಸಿ ಮಹಾ ವಿಚಾರವಂತರ ಅಭಿಪ್ರಾಯ ಸರಣಿಯನ್ನೆಲ್ಲಾ ಓದುಗರ ಮುಂದಿಟ್ಟು ವಿಮರ್ಶಿಸಿದ್ದಾರೆ. `ಹಿಂದಿನವರು ಕಾಮ ಪ್ರಚೋದನೆ ಮಾಡಿಲ್ಲವೆ? ಇಂದಿನವರು ಮಾಡಿಲ್ಲವೆ? ಮತಗಳು ಮಾಡಿಲ್ಲವೆ? ಸಾಹಿತ್ಯವು ಮಾಡಿಲ್ಲವೆ? ನಮ್ಮ ಸಮಾಜವೇ ಮಾಡಿಲ್ಲವೆ?' ಮುಂತಾಗಿ ಎತ್ತಿ ತೋರಿಸಿ, ಆ ರೀತಿ ಮಾಡಲು ತಮಗೂ ಹಕ್ಕುಂಟೆಂಬುದನ್ನು ಸ್ಥಾಪಿಸಿದ್ದಾರೆ. ಹಾಗೆ ಮಾಡಿದವರಲ್ಲಿ ತಪ್ಪೇನೂ ಇಲ್ಲವೆಂದು ವಾದಿಸಿದ್ದಾರೆ. ಅವರ ವಾದವನ್ನು ನಾವು ಒಪ್ಪಬಹುದು, ಬಿಡಬಹುದು. ಆದರೆ ಇರುವ ನಿಜಾಂಶವನ್ನು ಗ್ರಹಿಸಲು ಅಡ್ಡಿಯೇನಿಲ್ಲ. ಶ್ರೀ ಅ.ನ. ಕೃಷ್ಣರಾಯರು ಮತ್ತು ಅವರ ಸಾಹಿತ್ಯದ ಅಭಿಮಾನಿಗಳೂ, ವಿರೋಧಿಗಳೂ ಜತೆಗೆ ವಿಮರ್ಶಕ ಬಾಂಧವರೂ ಅಗತ್ಯವಾಗಿ ಓದಬೇಕಾದುದು ಈ ಗ್ರಂಥ. ಶ್ರೀ ಅ.ನ. ಕೃಷ್ಣರಾಯರು ತಮ್ಮ ವಿಮರ್ಶಕರ ಮೇಲೆ ಸಿಟ್ಟಿಗೆದ್ದರೂ ಪರವಾಗಿಲ್ಲ. ಇಂತಹ ವಿದ್ವತ್ಪೂರ್ಣ ಗ್ರಂಥ ನಿರ್ಮಿಸಿದುದಕ್ಕಾಗಿ ಅಭಿನಂದಿಸುತ್ತೇವೆ. ಆರ್ಥಿಕ ದೃಷ್ಟಿಯಿಂದ ಅಷ್ಟು ಲಾಭದಾಯಕವಾಗದಿದ್ದರೂ, ಕನ್ನಡ ಸಾಹಿತ್ಯದ ಒಂದು ಮುಖದ ಸಿಂಹಾವಲೋಕನಕ್ಕೆ ಸಹಾಯಕವಾಗಲೆಂದು ಈ ಗ್ರಂಥವನ್ನು ಪ್ರಕಾಶಿಸಿರುವ `ವಾಹಿನಿ ಪ್ರಕಾಶನ'ದವರ ಧೈರ್‍ಯ ಸಾಹಸ ಮೆಚ್ಚಬೇಕಾದುದೇ. ಸಾಹಿತ್ಯದಲ್ಲಿನ ಈ ಕುರುಕ್ಷೇತ್ರ ನೋಡಿದ ಮೇಲೆ, ಯಾರಾದರೂ `ಸಾಹಿತ್ಯ ಮತ್ತು ಸಹನೆ' ಎಂಬ ಗ್ರಂಥ ಬರೆದಲ್ಲಿ ನಾಡಿಗೂ ಸಾಹಿತ್ಯಕ್ಕೂ ಉಪಕಾರಾವಾದೀತು!
(`ತಾಯಿನಾಡು', `ಪ್ರಕಟಣ ಪ್ರಪಂಚ' ಅಂಕಣ, `ಪುಸ್ತಕಪ್ರಿಯ', ೧೪-೯-೧೯೫೨)
[ಕೈಹೊತ್ತಿಗೆಗಳ ಮಹಾಪೂರವಿದ್ದ ಐವತ್ತರ ದಶಕ ಕನ್ನಡ ಸಾಹಿತ್ಯಕ್ಕೆ ಸಮೃದ್ಧ ಕಾಲ. ಹತ್ತಾರು ವಿವಾದಗಳ ನಡುವೆ ಪ್ರಧಾನವಾಗಿ ಚರ್ಚಿತವಾದ ಕೃತಿಗಳೆಂದರೆ ಕಾದಂಬರಿ ಸಾರ್ವಭೌಮ ಅನಕೃ ಅವರ `ಶನಿಸಂತಾನ', `ನಗ್ನಸತ್ಯ' ಮತ್ತು `ಸಂಜೆಗತ್ತಲು' ಕೃತಿಗಳು. ಈ ಬಗ್ಗೆ ಮನನೊಂದು ಅನಕೃ ಬರೆದ `ಸಾಹಿತ್ಯ ಮತ್ತು ಕಾಮ ಪ್ರಚೋದನೆ' ಕೃತಿಯ ವಿಮರ್ಶೆಯನ್ನು ಪತ್ರಕರ್ತ ಹೆಚ್.ಆರ್. ನಾಗೇಶರಾವ್ ತಾವು ಹಿರಿಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದ `ತಾಯಿನಾಡು' ಪತ್ರಿಕೆಗೆ ಬರೆದಿದ್ದರು. `ಪ್ರಕಟಣ ಪ್ರಪಂಚ' ಸಾಪ್ತಾಹಿಕ ಅಂಕಣಕ್ಕೆ ನಾಗೇಶರಾವ್ ಪುಸ್ತಕ ವಿಮರ್ಶೆಯನ್ನು `ಪುಸ್ತಕಪ್ರಿಯ' ಹೆಸರಿನಲ್ಲಿ ನಿಯಮಿತವಾಗಿ ಬರೆಯುತ್ತಿದ್ದರು.]

4 comments:

Anonymous said...

ಶ್ರೀ ಸುಧೀಂದ್ರ ಅವರಿಗೆ ನಮಸ್ಕಾರ.

ಶ್ರೀ ಎಚ್.ಆರ್. ನಾಗೇಶರಾಯರ್ ಪರಿಚಯವನ್ನು, ಅವರ ಲೇಖನಗಳನ್ನು ಈ ಬ್ಲಾಗ್ ಮುಖಾಂತರ ಮಾಡಿಕೊಡುತ್ತಿರುವುದಕ್ಕೆ ಧನ್ಯವಾದಗಳು. ಕನ್ನಡ ಪತ್ರಕರ್ತರಿಗೆ ಸಂಬಂಧಿಸಿದ ಕೆಲವು ಅಪರೂಪದ ಮಾಹಿತಿಯೂ ಇಲ್ಲಿ ಲಭ್ಯವಿದೆ.

ಅನಕೃ ಮತ್ತು ಸ್ನೇಹಿತರ ಪ್ರಗತಿಶೀಲ ಚಳುವಳಿಯಗೆ ವಿರುದ್ಧವಾಗಿ ಪ್ರಚಾರ ಮಾಡಿದವರಲ್ಲಿ ಅಂದು ಮುಖ್ಯರಾದವರು ಶ್ರೀ ನಿರಂಜನ ಅವರು (ಕುಳಕುಂದ ಶಿವರಾಯರು). ಅದೇ ಶ್ರೀ ನಿರಂಜನರು ‘ರಸಚೇತನ’ ಗ್ರಂಥದಲ್ಲಿ ಈ ರೀತಿ ಬರೆಯುತ್ತಾರೆ.

“ಗುಣಕ್ಕೆ ಮತ್ಸರ ಇಲ್ಲ”

-----------------
ತಾನು ಜನ್ಮವೆತ್ತಿದ ನಾಡಿಗೆ ಒಬ್ಬ ಸಾಹಿತಿ, ಕಲಾವಿದ, ಶ್ರೀಸಾಮಾನ್ಯ ಕೂಡ ಸಲ್ಲಿಸಬೇಕಾದ ಸೇವೆಯುಂಟು. ಋಣ ತೀರಿಕೆ ಎನ್ನಬಹುದು ಬೇಕಾದರೆ. ಅದನ್ನು ಎಷ್ಟು ಘನತರವಾಗಿ ಮಾಡಿದ್ದಾರೆ ಅನಕೃ!. ಒಬ್ಬ ಕೃಷ್ಣರಾಯರು ಸಲ್ಲಿಸಿರುವುದು ನೂರು ಸಾಹಿತಿಗಳ, ನೂರು ಕಲಾವಿದರ, ನೂರು ಜನ ನಾಡು ಕಟ್ಟುವವರ ಸಾಲವನ್ನು. ಒಂದು ಜೀವಮಾನದಲ್ಲೇ ಮಾಡಿರುವುದು ಹಲವು ಜನ್ಮಗಳ ಕೆಲಸ.

ಅ.ನ. ಕೃಷ್ಣರಾಯರ ಹಲವು ಸಾಧನೆಗಳಲ್ಲಿ ಅತ್ಯಂತ ಶ್ರೇಷ್ಠವಾದುದು ಯಾವುದು ? ತನ್ನತನದ ಅರಿವನ್ನು ಕನ್ನಡ ಜನಪದದಲ್ಲಿ ಮೂಡಿಸಿದ್ದು. ಸತ್ತವರಂತೆ ಬಿದ್ದಿದ್ದ ಕನ್ನಡ ಜನ ಅನಕೃ ವಾಣಿಯನ್ನು ಕೇಳಿ ಚೇತರಿಸಿಕೊಂಡರು. ಹಲವು ಆಡಳಿತಗಳಲ್ಲಿ ನಾಡು ಹಂಚಿಹೋಗಿದ್ದ ವೇಳೆಯಲ್ಲೂ, ಕನ್ನಡಿಗರೆಲ್ಲ ಒಂದೇ ನೆಲದ ಮಕ್ಕಳೆಂಬ ಭಾವನೆಯನ್ನು ರೂಪಿಸಿದರು. ವಾಚನಾಭಿರುಚಿಯನ್ನು ಕನ್ನಡ ಜನರಲ್ಲಿ ಉಂಟುಮಾಡಿದ ವೆಂಕಟಾಚಾರ್ಯ, ಗಳಗನಾಥರ ಸಾಲಿನಲ್ಲಿ ನಿಲ್ಲುವ ಹೆಸರು ಅನಕೃ. ಅವರು ಕಣ್ಡಾಡಿಸಿದ ಲೇಖನಿ, ಸಂದರ್ಶಿಸಿದ ಕುಂಚ ಹೊಸ ಸೃಷ್ಟಿಗೆ ಕಾರಣವಾದವು. ಅವರ ಭುಜವನೇರಿ,"ಇನ್ನೂ ದೂರ ಕಾಣಿಸುತ್ತದೆ"ಎಂದು ನುಡಿದವರು ಎಷ್ಟು ಜನ!. ಸರಸ್ವತಿಯ ಅನುಗ್ರಹದ ಬೆಲೆ ಅವರ ಒಂದು ಪ್ರೋತ್ಸಾಹದ ನುಡಿಗೆ. ನವೋದಯದ ತಂಗಾಳಿ, ಹೊಂಬಿಸಿಲುಗಳಲ್ಲಿ ಗರಿಗೆದರಿದ ನಾಡಿನ ಹತ್ತು ಮೂಲೆಗಳ ನೂರು ಹಕ್ಕಿಗಳಿಗೆ"ಅನುಭವ ಮಂಟಪ"ವಾಯಿತು ಅನಕೃ ಮನೆ.

ವಿಮರ್ಶಕರು ನುಡಿಯಬಹುದು:"ಅನಕೃ ಬರೆದುದೆಲ್ಲ ಶ್ರೇಷ್ಟ ಸಾಹಿತ್ಯವಲ್ಲ". ನಿಜವಾದ ಮಾತೇ. ಆದರೆ ಬರೆದುದೆಲ್ಲವೂ ಶ್ರೇಷ್ಟವಾಗಿರುವ ಸಾಹಿತಿ ಈ ಲೋಕದಲ್ಲಿ ಯಾರಿದ್ದಾರೆ? ಒಂದು ಕೃತಿ ಇರಬಹುದು, ಹತ್ತು ಇರಬಹುದು, ಶ್ರೇಷ್ಠ ಸಾಹಿತ್ಯವನ್ನು ಲೇಖಕನೊಬ್ಬ ರಚಿಸಿದ್ದಾನೆ ಎನ್ನುವುದೇ ಹೆಗ್ಗಳಿಕೆಯ ಅಂಶ. ವಾಸ್ತವ ಸಂಗತಿಯೆಂದರೆ, ಅನಕೃ ಹಿರಿಮೆಗೆ ಕಾರಣ ಅವರ ಬರವಣಿಗೆ ಮಾತ್ರವಲ್ಲ. ಅದು, ಅವರ ಒಟ್ಟು ಕಾಯಕ; ಮೇರೆ, ತೂಕಗಳನ್ನು ಖಚಿತಪಡಿಸಲಾರದಂಥ ಸಾಧನೆ. ಅನಕೃರಿಂದ ಸಾಹಿತ್ಯ ಜನಪ್ರಿಯವಾಯಿತು. ಅವರ ಕಣ್ಕಾಪಿನಲ್ಲಿ ಹಲವಾರು ಯುವಕ ಲೇಖಕರು ಉತ್ತಮ ಕತೆಗಾರರಾದರು, ಕಾದಂಬರಿಕಾರರಾದರು. ಕಲಾವಿದರು - ಚಿತ್ರಕಾರರು, ಸಂಗೀತಗಾರರು, ನಟರು ಬೆಳಕಿಗೆ ಬಂದರು. ಜಾತಿಯ ಕೋಟೆಗಳು ಪಾಳು ಬಿದ್ದವು. ಕುರುಡು ಸಂಪ್ರದಾಯಗಲೂ ಬಿಲ ಸೇರಿದವು. ಏಕೀಕೃತ ನಾಡಿನ ಚಿತ್ರ ಸ್ಫುಟವಾಯಿತು.

-ನಿರಂಜನ
-----------------

-ವಾಸು

Haldodderi said...

ಶ್ರೀ ವಾಸು ಅವರಿಗೆ ವಂದನೆಗಳು.

ಕನ್ನಡದಲ್ಲಿ ವಿಜ್ಞಾನ ಲೇಖನಗಳನ್ನು ನಾನು ಬರೆಯಲು ಪರೋಕ್ಷವಾಗಿ ಪ್ರೋತ್ಸಾಹಿಸಿದವರಲ್ಲಿ ನೀವೂ ಒಬ್ಬರು - ನಿಮ್ಮ ಬರಹ ತಂತ್ರಾಂಶದ ಮೂಲಕ. ಈಗಷ್ಟೇ ದಟ್ಸ್ ಕನ್ನಡದ ಶ್ಯಾಮ್ ಜತೆ ಅನಕೃ ಬಗ್ಗೆ ಹಾಗೂ ನಿಮ್ಮ ಬಗ್ಗೆ ಮಾತನಾಡುತ್ತಿದ್ದೆ. (ನನ್ನ ಮೊದಲ ಲೇಖನವನ್ನು ಕನ್ನಡಪ್ರಭದಲ್ಲಿ ಪ್ರಕಟಿಸಿ, ನಂತರದ ನನ್ನ ಎಲ್ಲ ತೊಂದರೆಗಳಿಗೂ ಕಾರಣರಾದವರು ಶ್ಯಾಮ್). ಇಂದು ಮಾರುಕಟ್ಟೆಗೆ ಬಂದಿರುವ ರವಿ ಬೆಳಗೆರೆಯವರ ‘ಓ ಮನಸೇ’ ಪಾಕ್ಷಿಕದಲ್ಲಿ ಶರತ್ ಕಲ್ಕೋಡ್ ’ನೂರಾದರೂ ನೆನಪಾಗಲೊಲ್ಲರು ಅನಕೃ’ ಲೇಖನ ಬರೆದಿದ್ದಾರೆ. ಅನಕೃ ಅವರನ್ನು ಸ್ವತಃ ಕಂಡು ಮಾತನಾಡಿದ್ದ ನನ್ನ ತಂದೆ ಅನಕೃ ಅವರ ಅತ್ಯದ್ಭುತ ಕರ್ತೃತ್ವ ಶಕ್ತಿಯ ಬಗ್ಗೆ ನನ್ನಲ್ಲಿ ಹೇಳುತ್ತಿದ್ದರು. ಏಕಕಾಲಕ್ಕೆ ವಿಭಿನ್ನ ವಿಷಯಗಳ ನಾಲ್ಕೈದು ಕಾದಂಬರಿಗಳನ್ನು ಬರೆಯಲು ಆರಂಭಿಸಿ, ಒಟ್ಟೊಟ್ಟಿಗೆ ಅವುಗಳನ್ನು ಮುಗಿಸುತ್ತಿದ್ದರಂತೆ. ನಾವಿಂದು ಬೆನ್ನು ತಟ್ಟುವ ಪ್ಯಾರಲೆಲ್ ಪ್ರಾಸೆಸಿಂಗ್ ತಂತ್ರಜ್ಞಾನ ಅನಕೃ ಅವರಿಗೆ ಕರಗತವಾಗಿತ್ತು. ಲಕ್ಷಗಟ್ಟಲೆ ಕನ್ನಡಿಗರನ್ನು ಕನ್ನಡ ಓದುವಂತೆ ಪ್ರೇರೇಪಿಸಿದ ಅನಕೃ ಮತ್ತೆ ಚರ್ಚೆಯಂಗಳಕ್ಕೆ ಬರಬೇಕು.

- ಹಾಲ್ದೊಡ್ಡೇರಿ

Anonymous said...

ಶ್ರೀ ಸುಧೀಂದ್ರ ನಮಸ್ಕಾರ,

ನೀವು ಹೇಳಿದ್ದು ಸರಿ. ಬೀಚಿ ಒಂದು ಲೇಖನದಲ್ಲಿ ಈ “ಪ್ಯಾರಲೆಲ್ ಪ್ರೋಸೆಸ್ಸಿಂಗ್” ವಿಷಯ ತಮಾಷೆಯಾಗಿ ಬರೆದಿದ್ದಾರೆ. ಅನಕೃ ಪುಸ್ತಕಗಳ ಒಂದು ಗುಣ ಎಂದರೆ ಒಬ್ಬ ಸಾಮಾನ್ಯ ಓದುಗನಿಗೂ ಒಮ್ಮೆ ಓದಲು ಶುರು ಮಾಡಿದರೆ ಮುಗಿಯುವವರೆಗೂ ಬಿಡುವುದಿಲ್ಲ. ಸಂಭಾಷಣೆಗಳ ಮೂಲಕವೇ ಕಥೆಯನ್ನು ಬೆಳೆಸುವ ಅವರ ಶೈಲಿ ಅನನ್ಯ. ೬೩ ವಯಸ್ಸಿಗೇ ೨೦೦ರಷ್ಟು ಕೃತಿಗಳನ್ನು ರಚಿಸಿದ ಅವರು ಇನ್ನಷ್ಟು ಆಯಸ್ಸು, ಆರೋಗ್ಯ, ನೆಮ್ಮದಿ ಸಿಕ್ಕಿದ್ದರೆ ಇನ್ನೊಂದು ೧೦೦ ಕೃತಿಗಳನ್ನು ರಚಿಸಿರುತ್ತಿದ್ದರೇನೋ!?

-ವಾಸು

Haldodderi said...

ಶ್ರೀ ವಾಸು,

ನಿಮ್ಮ ಮಾತು ಒಪ್ಪುವಂಥದ್ದು. ಅನಕೃ ಅಷ್ಟೇ ಅಲ್ಲ, ಬೀಚಿಯವರೂ ಸ್ವಲ್ಪ ಹೆಚ್ಚು ಕಾಲ ಇರಬೇಕಿತ್ತು. ಜತೆಗೆ ರಾಜರತ್ನಂ ಅವರೂ ಇರಬೇಕಿತ್ತು. ಶ್ಯಾಮ್‍ಗೆ ನೆನಪಿಸಬೇಕಿತ್ತು - ಬೀಚಿ Vs. ರಾಜರತ್ನಂ ವಾಗ್ಯುದ್ಧ ಕೂಡಾ ಒಂದು ಕಾಲದಲ್ಲಿ ಹೆಸರಾಗಿತ್ತು. ಬೀಚಿ ಅವರ 'ನನ್ನ ಭಯಾಗ್ರಫಿ'ಗೆ ಉತ್ತರವೆಂಬಂತೆ ರತ್ನರ 'ನಿರ್ಭಯಾಗ್ರಫಿ' ಪ್ರಕಟವಾಗಿತ್ತು. ರಾಜರತ್ನಂರ ಸಾಹಿತ್ಯ ಪರಿಚಾರಿಕೆ (ಭಾಷಣಕ್ಕೆ ಕರೆದಾಗ ಪುಸ್ತಕ ಮಾರಾಟ ಮಾಡುವಿಕೆ) ಬೀಚಿಯವರಿಗೆ 'ಹಾತ್ಮೆ ಪೈಸಾ .. ಕಿವೀಮೆ ಭಾಷಣಾ' ಎಂಬ ಲೇವಡಿಯಾಗಿತ್ತು. ಬೀಚಿಯವರ ಆತ್ಮಚರಿತ್ರೆ ಪ್ರಜಾಮತ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುವಾಗ ನಾನು ಪ್ರೌಢಶಾಲೆಯಲ್ಲಿದ್ದೆ. ಆ ಪತ್ರಿಕೆಯಲ್ಲಿ ಗುಪ್ತಸಮಾಲೋಚನೆ ಹಾಗೂ ದಾಂಪತ್ಯ ಸಮಸ್ಯೆ ಅಂಕಣಗಳು ಪ್ರಕಟವಾಗುತ್ತಿದ್ದ ಕಾರಣ, ನಾವು ಆ ಪತ್ರಿಕೆಯನ್ನು ಹಿರಿಯರೆದುರಿಗೆ ಹಿಡಿಯುವ ಹಾಗಿರಲಿಲ್ಲ. ಕದ್ದು-ಮುಚ್ಚಿ ನಾನಾಗ ಓದುತ್ತಿದ್ದದ್ದು ಬೀಚಿಯವರ ಲೇಖನಮಾಲೆ! ಹಳೆಯ ನೆನಪುಗಳತ್ತ ಕರೆದೊಯ್ದುದಕ್ಕಾಗಿ ನಿಮಗೆ ಹಾಗೂ ಶ್ಯಾಮ್‍ಗೆ ವಂದನೆಗಳು.

- ಹಾಲ್ದೊಡ್ಡೇರಿ