'SRK' too started his career at Tayinadu
SR Krishnamurthy was one among few enthusiastic journalists who laid the foundation for Kannada Prabha. He left the newspaper when he was its News Editor, to take up an assignment with the American Embassy's Kannada Magazine. SRK started his career at Tayinadu and later joined Prajavani and held important positions. He was close to TSR and KS Ramakrishnamurthy (who later joined Kannada Prabha as associate editor). He narrates his initial days at Tayinadu in an autobiographical book called Moovattu Varsha (Thirty Years). An excerpt from the book.
‘ತಾಯಿನಾಡು’ ಪತ್ರಿಕೆಯಲ್ಲಿ ವೃತ್ತಿ ಆರಂಭಿಸಿದ ಎಸ್.ಆರ್. ಕೃಷ್ಣಮೂರ್ತಿ, ಮುಂದೆ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಹದಿಮೂರು ವರ್ಷಗಳ ಕಾಲ ಹಿರಿಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದರು. ‘ಕನ್ನಡಪ್ರಭ’ ಪತ್ರಿಕೆ ರೂಪುಗೊಳ್ಳುತ್ತಿದ್ದ ದಿನಗಳಿಂದಲೇ ನೇಮಕಗೊಂಡು, ನಂತರ ಸುದ್ದಿ ಸಂಪಾದಕರಾಗಿ ಪತ್ರಿಕೆಯ ಮುನ್ನಡೆಗೆ ವಿಶೇಷ ಕಾಣಿಕೆ ನೀಡಿದ್ದರು. ಮದರಾಸಿನ ಅಮೆರಿಕ ದೂತವಾಸದಲ್ಲಿ ಕನ್ನಡ ಸಂಚಿಕೆಯ ಸಂಪಾದಕನಾಗಿ ಮೂರು ವರ್ಷ ದುಡಿದ ನಂತರ ‘ಪ್ರಜಾಮತ’ ವಾರಪತ್ರಿಕೆಯ ‘ಫಿಚರ್ ಎಡಿಟರ್’ ಆಗಿಯೂ ಕಾರ್ಯನಿರ್ವಹಿಸಿದ್ದರು. ನಾಗೇಶರಾಯರ ಬಗ್ಗೆ ವಿಶೇಷ ಮಮತೆಯಿದ್ದ ಎಸ್ಸಾರ್‍ಕೆಯವರು ಪುಸ್ತಕ ಪ್ರಕಾಶನ, ಅನುವಾದ ಸೇವೆ ಮತ್ತಿತರ ಕ್ಷೇತ್ರದಲ್ಲಿ ಜತೆಯಾಗಿ ಕೆಲಸ ಮಾಡಿದ್ದರು. ಈ ಲೇಖನ ಅವರ ‘ಮೂವತ್ತು ವರ್ಷ’ ಎಂಬ ವೃತ್ತಿ ಜೀವನದ ಅನುಭವ ಕಥನದಿಂದ ಆಯ್ದ ಭಾಗ (ಪ್ರ.1979).
೦೦ ೦೦ ೦೦ ೦೦ ೦೦
1948ರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಮುಂದೇನು? ಎಂಬ ಪ್ರಶ್ನೆ ಎದ್ದಿತು. ಯಾವುದಾದರೂ ಕೆಲಸಕ್ಕೆ ಪ್ರಯತ್ನಿಸುವುದೆಂದು ಯೋಚನೆ ಮಾಡಿದೆ. ಮನೆಯವರು ಅದನ್ನೇ ಬೆಂಬಲಿಸಿದರು.
ಒಂದು ದಿನ ಚಾಮರಾಜಪೇಟೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಸಂಸ್ಕೃತ ಕಾಲೇಜು ಇವೆಲ್ಲ ಇರುವ ಈಗ ಪಂಪ ಮಹಾಕವಿ ರಸ್ತೆ ಎಂದು ಹೆಸರಾಗಿರುವ ರಸ್ತೆಯಲ್ಲಿ ನಡೆದು ಹೋಗುತ್ತಿದ್ದೆ. ‘ತಾಯಿನಾಡು ದಿನಪತ್ರಿಕೆ’ ಎಂಬ ನಾಮಫಲಕ ಕಾಣಿಸಿತು. ಸಂಸ್ಕೃತ ಕಾಲೇಜಿನ ಪಕ್ಕದಲ್ಲಿದ್ದ ಕಟ್ಟಡದಲ್ಲಿ ಅದರ ಕಾರ್ಯಾಲಯ. ಅಲ್ಲಿಗೆ ಹೋಗಿ ‘ಯಜಮಾನರನ್ನು ಕಾಣಬಹುದೇ?’ ಎಂದು ವಿಚಾರಿಸಿದೆ. ಅಲ್ಲಿದ್ದ ಒಬ್ಬ ಭೃತ್ಯ ‘ಮ್ಯಾನೇಜರನ್ನು ನೋಡಿ’ ಎಂದ. ಒಳಗೆ ಹೋಗಿ ಅವರನ್ನು ಕಂಡೆ. ಆಮೇಲೆ ತಿಳಿಯಿತು, ಅವರು ಕ್ಲೋಸ್‍ಪೇಟೆ (ಈಗಿನ ರಾಮನಗರ) ಸುಬ್ಬಾ ಶಾಸ್ತ್ರಿ ಅವರು. ಅಚ್ಚ ಖಾದೀಧಾರಿ. ಭಾರತೀಯ ಧರ್ಮ, ಇತಿಹಾಸಗಳನ್ನು ಬಹು ಚೆನ್ನಾಗಿ ಅಧ್ಯಯನ ಮಾಡಿದ್ದ ಧರ್ಮನಿಷ್ಠರು. ವೃತ್ತಿ ಪತ್ರಿಕಾಲಯದ ಮ್ಯಾನೇಜರ್.
‘ಸಾರ್, ನಿಮ್ಮಲ್ಲಿ ಯಾವುದಾದರೂ ಕೆಲಸ ಖಾಲಿ ಇದೆಯೇ?’ ಎಂದು ಸಂಕೋಚದ ದನಿಯಲ್ಲೇ ಕೇಳಿದೆ. ಅವರಿಗೆ ನನ್ನನ್ನು ನೋಡಿ ಏನನ್ನಿಸಿತೋ ಏನೋ. ‘ಏನು ಓದಿದ್ದೀಯಪ್ಪಾ? ಏನು ಕಲಿತಿದ್ದೀಯಾ?’ ಅಂದರು.
‘ಎಸ್ಸೆಸ್ಸೆಲ್ಸಿ ಪಾಸಾಗಿದೆ, ಟೈಪ್‍ರೈಟಿಂಗ್ ಮಾಡಿಕೊಂಡಿದ್ದೇನೆ.’
ಅವರು ಕ್ಷಣಕಾಲ ಮೌನವಾಗಿದ್ದು ನಂತರ ‘ನಾಡಿದ್ದು ಬಾರಪ್ಪ ನೋಡೋಣ’ ಅಂದರು. ಅಂತೆಯೇ ಹೋದೆ. ‘ನಮ್ಮ ಸರ್ಕ್ಯುಲೇಷನ್ ಇಲಾಖೆಯಲ್ಲಿ ಕೆಲವು ದಿನ ಕೆಲಸ ಮಾಡಪ್ಪ ನೋಡೋಣ’ ಅಂದರು.
ಕೆಲಸಕ್ಕೆ ಸೇರಿಕೊಂಡೆ. ಆಗ ನನಗೆ ಹದಿನೈದು ವರ್ಷ.
ಪತ್ರಿಕೆಯ ಪ್ರಸಾರಣ ಇಲಾಖೆಯಲ್ಲಿ ಚಂದಾದಾರರ ವಿಳಾಸಗಳನ್ನು ಟೈಪು ಮಾಡುವುದು, ಅವರ ಚಂದಾ ಲೆಕ್ಕಗಳನ್ನು ನೋಡಿಕೊಳ್ಳುವುದು - ಇವನ್ನೆಲ್ಲ ಕಲಿತೆ. ಜಾಹೀರಾತು ವಿಭಾಗದ ಪರಿಚಯವೂ ಆಯಿತು. ನನ್ನ ಆರಂಭದ ಸಂಬಳ ತಿಂಗಳಿಗೆ ಮೂವತ್ತೈದು ರೂಪಾಯಿ.
ಪತ್ರಿಕಾಲಯದಲ್ಲಿ ಕೆಲಸ ಮಾಡುತ್ತ ದಿನವೂ ಪತ್ರಿಕೆಯ ಸಂಪಾದನ, ಮುದ್ರಣ ಮುಂತಾದವನ್ನು ಗಮನಿಸುತ್ತಿದ್ದ ನನಗೆ ಕೆಲ ದಿನಗಳಲ್ಲೇ ಸಂಪಾದಕೀಯ ಕಾರ್ಯಚಟುವಟಿಕೆಯ ಪರಿಚಯವಾಗಿ ಅದರಲ್ಲಿ ಆಸಕ್ತಿ ಹುಟ್ಟಿತು. ಆ ವಿಭಾಗದಲ್ಲಿ ಕೆಲಸ ಮಾಡಲು ಅವಕಾಶ ಕೊಡಬೇಕೆಂದು ಕೋರಿದೆ. ಮ್ಯಾನೇಜರ್ ಶಾಸ್ತ್ರಿಗಳು ಪತ್ರಿಕೆಯ ಮಾಲೀಕ ಶ್ರೀ ಪಿ.ಆರ್. ರಾಮಯ್ಯನವರಿಗೆ ಹೇಳಿದರು. ರಾಮಯ್ಯನವರೂ, ಸಂಪಾದಕ ಶ್ರೀ ಪಿ. ಬಿ. ಶ್ರೀನಿವಾಸನ್ ಅವರೂ ‘ಕೆಲ ದಿನ ಕೆಲಸ ಮಾಡಲಿ, ನೋಡೋಣ. ಸಂಪಾದಕೀಯ ವಿಭಾಗಕ್ಕೆ ಒಗ್ಗುವುದಾದಲ್ಲಿ ತೆಗೆದುಕೊಳ್ಳೋಣ’ ಅಂದರು. ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡಲಾರಂಭಿಸಿದೆ. ಸಹೋದ್ಯೋಗಿ ಹಿರಿಯರ ಸಹಾಯ ಸಹಕಾರಗಳಿಂದ ಸ್ವಲ್ಪ ಸಮಯದಲ್ಲೇ ಸುದ್ದಿಗಳ ಭಾಷಾಂತರ, ಸ್ವಂತವಾಗಿ ವರದಿಗಳನ್ನು ಬರೆಯುವುದು, ಕರಡಚ್ಚು (‘ಪ್ರೂಫ್’) ತಿದ್ದಾವಣೆ, ಸಂಚಿಕೆಗಳ ವಿನ್ಯಾಸ - ಇವನ್ನೆಲ್ಲ ಕಲಿತುಕೊಂಡೆ. ಆಗಿನ ಕಾಲದಲ್ಲಿ ಪತ್ರಿಕೆಗಳಲ್ಲಿ ಸಂಪಾದಕೀಯ ಸಿಬ್ಬಂದಿ ಸಂಖ್ಯೆ ಬಹು ಕಡಿಮೆಯಿರುತ್ತಿತ್ತು. ಸಿಬ್ಬಂದಿಯಲ್ಲಿನ ನಾಲ್ಕಾರು ಜನರೇ ಸುದ್ದಿಗಳ ಭಾಷಾಂತರ, ಸ್ಥಳೀಯ ವಿದ್ಯಮಾನಗಳ ವರದಿ, ಪ್ರೂಫುಗಳ ತಿದ್ದಾವಣೆ, ಪುಟಗಳ ಸಿದ್ಧಮಾಡುವಿಕೆ - ಈ ಎಲ್ಲ ಕೆಲಸಗಳನ್ನೂ ನೋಡಿಕೊಳ್ಳಬೇಕಾಗಿತ್ತು. ಕೈತುಂಬ ಕೆಲಸವಿರುತ್ತಿತ್ತು. ಈ ಮೂಲಭೂತ ತರಪೇತು ನನಗೆ ವೃತ್ತಿಜೀವನದಲ್ಲಿ ಅಮೂಲ್ಯ ಸಂಪತ್ತಾಯಿತೆಂದು ಹೇಳಿದರೆ ಅತಿಶಯವಾಗದು. ಸಂಪಾದಕೀಯ ವಿಭಾಗದಲ್ಲಿ ನನ್ನ ಕೆಲಸ ಸಂಪಾದಕರಿಗೂ ಮೆಚ್ಚುಗೆಯಾಗಿ ಉಪಸಂಪಾದಕ ಹುದ್ದೆ ಕಾಯಂ ಆಯಿತು.
ನನ್ನ ಪತ್ರಿಕಾವೃತ್ತಿ ಆರಂಭವಾದದ್ದು ಹೀಗೆ.
ಆಗ್ಗೆ ‘ತಾಯಿನಾಡು’ ಪತ್ರಿಕೆ ಒಳ್ಳೇ ಉಚ್ಛ್ರಾಯ ಸ್ಥಿತಿಯಲ್ಲಿದ್ದು ಅತ್ಯಂತ ಪ್ರಸಾರ, ಜನಪ್ರಿಯತೆ, ಪ್ರಭಾವ ಹೊಂದಿತ್ತು. ರಾಷ್ಟ್ರೀಯ ಭಾವನೆಯುಳ್ಳ ದಿನಪತ್ರಿಕೆಯಾಗಿ ಅದು ಮೈಸೂರು ಸಂಸ್ಥಾನದಲ್ಲೇ ಅಲ್ಲದೆ ಹೊರಗಡೆಯೂ ಹೆಸರು ಪಡೆದಿತ್ತು. ಮೊಟ್ಟ ಮೊದಲಿಗೆ ಕನ್ನಡ ದಿನಪತ್ರಿಕೆಯೊಂದರ ಮುದ್ರಣಕ್ಕೆ ರೋಟರಿ ಮುದ್ರಣಯಂತ್ರವನ್ನು ತರಿಸಿದವರು ರಾಮಯ್ಯನವರು. ಸಂಪಾದಕರು ವಿದೇಶ ಪ್ರವಾಸಗಳನ್ನು ಕೈಗೊಂಡು ತಮ್ಮ ವೃತ್ತಿ ಅನುಭವ ವಿಸ್ತರಿಸಿಕೊಳ್ಳಲು ಉದಾರವಾಗಿ ನೆರವಾದರು.
ಪತ್ರಿಕೆಯಲ್ಲಿ ಪ್ರಕಟವಾಗುವ ಸುದ್ದಿಗಳು, ಸಂಪಾದಕೀಯಗಳು, ಟೀಕೆ ಟಿಪ್ಪಣಿಗಳು ಎಲ್ಲವೂ ಸತ್ಯವಾಗಿರಬೇಕು, ವ್ಯಕ್ತಿನಿಂದೆಯಿಂದ ಮತ್ತು ಅತಿರೀಕಗಳಿಂದ ಮುಕ್ತವಾಗಿರಬೇಕು, ಬರವಣಿಗೆ ಸಾಮಾನ್ಯರಿಗೂ ಅರ್ಥವಾಗುವಂತೆ ತಿಳಿಯಾದ ಶೈಲಿಯಲ್ಲಿರಬೇಕು - ಇಂಥ ಕೆಲವು ಆದರ್ಶ ಪತ್ರಿಕಾ ತತ್ತ್ವಗಳನ್ನು ‘ತಾಯಿನಾಡು’ ಅನನ್ಯವಾದ ರೀತಿಯಲ್ಲಿ ಪಾಲಿಸಿಕೊಂಡು ಬಂದಿತು. ಇಂಗ್ಲಿಷಿನಲ್ಲಿ ಮದರಾಸಿನ ‘ಹಿಂದೂ’ ಪತ್ರಿಕೆ ಕರಾರುವಾಕ್ಕಾದ ವರದಿಗಳು, ಪಾಂಡಿತ್ಯಪೂರ್ಣವೂ, ಆಧಾರಯುತವೂ ಆದ ಲೇಖನಗಳಿಗೆ ಮೊದಲಿಂದಲೂ ಹೆಸರಾದದ್ದು. ಈಗ ಅದು ಶತಮಾನೋತ್ಸವವನ್ನು ಆಚರಿಸುತ್ತಿದೆ. ಕನ್ನಡನಾಡಿನಲ್ಲಿ ಈ ಶುದ್ಧ ಸಂಪ್ರದಾಯವನ್ನು ‘ತಾಯಿನಾಡು’ ಬೆಳಸಿಕೊಂಡು ಬಂದಿದ್ದು ಅದು ‘ಮೈಸೂರಿನ ಹಿಂದೂ’ ಎಂದು ಖ್ಯಾತಿ ಪಡೆದಿತ್ತು. ಪತ್ರಿಕೋದ್ಯಮದ ಘನತೆ ಗೌರವಗಳನ್ನು ಎತ್ತಿ ಹಿಡಿಯುವುದರಲ್ಲೂ ‘ತಾಯಿನಾಡು’ ಮುಂದಾಗಿತ್ತು; ಪತ್ರಿಕಾ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಪ್ರತಿಪಾದಿಸುತ್ತಿತ್ತು. ಪತ್ರಿಕೆಯ ವರಿಷ್ಠರು ವೃತ್ತಿ ಗೌರವ ರಕ್ಷಣೆಗೆ ಬೆಲೆ ಕೊಡುತ್ತಿದ್ದರು.
ರಾಮಯ್ಯನವರು ಕೆಲಕಾಲ ‘ಡೈಲಿ ನ್ಯೂಸ್’ ಎಂಬ ಇಂಗ್ಲಿಷ್ ಪತ್ರಿಕೆಯೊಂದನ್ನು ನಡೆಸುತ್ತಿದ್ದರು. ನಾವು ಒಂದೇ ಸಂಪಾದಕೀಯ ಸಿಬ್ಬಂದಿಯವರು ಅದಕ್ಕೂ ಕೆಲಸ ಮಾಡುತ್ತಿದ್ದೆವು. ಐದು ವರ್ಷಗಳ ಕಾಲ ‘ತಾಯಿನಾಡು’ ಪತ್ರಿಕೆಯಲ್ಲಿ ಕೆಲಸ ಮಾಡಿ 1954ರಲ್ಲಿ ನಾನು ‘ಪ್ರಜಾವಾಣಿ’ ದಿನಪತ್ರಿಕೆಯಲ್ಲಿ ಉಪಸಂಪಾದಕನಾಗಿ ಸೇರಿದೆ. ನನ್ನ ಪತ್ರಿಕಾ ವೃತ್ತಿಗೆ ನಾಂದಿ ಎನ್ನಬಹುದಾದ ‘ತಾಯಿನಾಡು’ ಸೇವಾವಧಿಯಲ್ಲಿ ಅಲ್ಲಿನ ಸಂಪಾದಕೀಯ ವರ್ಗದಲ್ಲಿದ್ದ ಹಿರಿಯರಾದ ಎಂ.ಎಸ್. ರಾಮಸ್ವಾಮಿ ಅಯ್ಯಂಗಾರ್, ಎಚ್.ಆರ್. ನಾಗೇಶರಾವ್ (ಈಗ ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಸಹ ಸಂಪಾದಕರು) ಮತ್ತಿತರರ ಸಹಾಯ, ಸಹಕಾರಗಳಿಂದ ನನ್ನ ಪತ್ರಿಕಾ ವೃತ್ತಿಗೆ ಒಂದು ದೃಢ ಅಸ್ತಿಭಾರ ದೊರೆತಂತಾಯಿತು. ವೃತ್ತಿಯ ಆದರ್ಶ ಮತ್ತು ಮೌಲ್ಯಗಳನ್ನು ತಿಳಿದುಕೊಳ್ಳಲೂ ಸಹಾ ನನ್ನ ‘ತಾಯಿನಾಡು’ ಸೇವೆ ತುಂಬಾ ನೆರವಾಯಿತು. ನಿಚ್ಚಳ ಜನಹಿತ ಭಾವನೆಯಿಂದ ಶ್ರಮಿಸಿ ಒಂದು ಪತ್ರಿಕೆಯನ್ನು ಎಷ್ಟು ಪ್ರಭಾವಶಾಲಿಯಾಗಿ ಮಾಡಬಹುದೆಂಬುದನ್ನು ರಾಮಯ್ಯನವರು ತೋರಿಸಿಕೊಟ್ಟರು. ಬಹು ಸಣ್ಣ ಪ್ರಮಾಣದಲ್ಲಿ ಆರಂಭವಾದ ‘ತಾಯಿನಾಡು’ ಪತ್ರಿಕೆ ಈ ಶತಮಾನದ ಪ್ರಥಂಆರ್ಧದಲ್ಲಿ ಅತ್ಯಂತ ದೊಡ್ಡ ಕನ್ನಡ ಪತ್ರಿಕೆಯಾಗಿ ಬೆಳೆಯಲು ಶ್ರಮಿಸಿದ ರಾಮಯ್ಯನವರ ಸಾಧನೆ ಕನ್ನಡ ಪತ್ರಿಕಾ ರಂಗದ ಇತಿಹಾಸದಲ್ಲಿ ಒಂದು ಪ್ರಮುಖ ಅಧ್ಯಾಯ.
No comments:
Post a Comment