

‘ತಾಯಿನಾಡು’ ಮತ್ತು ‘ಚಿತ್ರಗುಪ್ತ’ ಪತ್ರಿಕೆಗಳಿಗೆ 50ರ ದಶಕದಲ್ಲಿ ಪುಸ್ತಕ ವಿಮರ್ಶೆಗಳನ್ನು ಮಾಡುತ್ತಿದ್ದವರು - ‘ಪುಸ್ತಕಪ್ರಿಯ’ ಹೆಸರಿನ ನಾಗೇಶರಾವ್. ಐದು ದಶಕಗಳ ಹಿಂದಿನ ವಿಮರ್ಶೆಯ ಸ್ವರೂಪ, ಅದಕ್ಕೆ ದೊರಕುತ್ತಿದ್ದ ಪ್ರತಿಕ್ರಿಯೆಯ ಒಂದು ಸ್ಯಾಂಪಲ್ ಇಲ್ಲಿದೆ.
ರಂಗಮ್ಮನ ವಠಾರ(ಕಾದಂಬರಿ. ಲೇಖಕರು: ಶ್ರೀ ‘ನಿರಂಜನ’, ಪ್ರಕಾಶಕರು: ವಾಹಿನಿ ಪ್ರಕಾಶನ, ಜಯಚಾಮರಾಜ ರಸ್ತೆ, ಬೆಂಗಳೂರು-2, ಬೆಲೆ: ಒಂದೂವರೆ ರೂಪಾಯಿ)
"ವಠಾರ ಜೀವನವೆಂದರೆ ‘ಗಟಾರ’ ಜೀವನವಲ್ಲ" ಎಂಬುದನ್ನು ಬಿತ್ತರಿಸುವ ಶ್ರೇಷ್ಠ ಕೃತಿ, ಈ 274 ಪುಟಗಳ ಕೈ ಹೊತ್ತಿಗೆ. ಬೆಂಗಳೂರಿನಂತಹ ನಗರದಲ್ಲಿ, ಮಧ್ಯಮ ವರ್ಗದ ಜನರು ವಸತಿಗಾಗಿ ‘ಕಡಿಮೆ’ ಬಾಡಿಗೆಯ ವಠಾರಗಳನ್ನು ಅವಲಂಬಿಸಿ, ಎಂತಹ ಕಷ್ಟಗಳನ್ನೂ ನುಂಗಿಕೊಂಡು ಜೀವನ ನಡೆಸುತ್ತಿರುವುದನ್ನು ನಿರಂಜನರು ಹೃದಯಂಗಮವಾಗಿ ವಿವರಿಸಿದ್ದಾರೆ. ಇಂತಹ ದುರ್ಭರ ಸ್ಥಿತಿಯಲ್ಲೂ ಜೀವನದ ಕಹಿಯನ್ನು ಮರೆತು ತಮ್ಮ ಪ್ರೇಮದ ಬಾಳ್ವೆಯಿಂದ, ವಿನೋದ ರಸಿಕತೆಯಿಂದ ವಾತಾವರಣವನ್ನೇ ಆಹ್ಲಾದಗೊಳಿಸಬಹುದೆಂಬುದಕ್ಕೆ ಉತ್ತಮ ನಿದರ್ಶನವಾಗಿ ಬರುತ್ತಾರೆ, ಚಂಪಾವತಿ ಮತ್ತು ಶಂಕರನಾರಾಯಣರಾಯರು. ವಠಾರ ಜೀವನವನ್ನು ವಿಷಮಯವಾಗಿ ಮಾಡಲು ಪ್ರಯತ್ನಿಸುವ ಪಾತ್ರಗಳೂ ಇಲ್ಲದೇ ಇಲ್ಲ. ಎಂತಹ ದ್ವೇಷವಿದ್ದರೂ ಸಾವಿನ ಮುಂದೆ ಮತ್ತು ಸಾರ್ವತ್ರಿಕ ಗಂಡಾಂತರದ ಮುಂದೆ ಮರೆತು ವಿಶಾಲ ಹೃದಯವನ್ನು ತೋರುವ ವ್ಯಕ್ತಿಗಳೂ ಇಲ್ಲಿ ಚಿತ್ರಿತವಾಗಿದ್ದಾರೆ; ಕೊಡ ನೀರಿಗಾಗಿ ಮತ್ತು ಒಂದು ನಿಮಿಷ ಮುಂಚಿತವಾಗಿ ನೀರು ಹಿಡಿಯುವುದಕ್ಕಾಗಿ ಕಚ್ಚಾಡುವ ‘ಮಹಾರಾಯಿತಿ’ಯರೂ ಇದ್ದಾರೆ.
ವಠಾರ ಜೀವನದಲ್ಲಿ ನಿಜ ಪ್ರೇಮ ಹುಟ್ಟುತ್ತದೆ; ಕಾಮ ತಲೆದೋರುತ್ತದೆ. ದ್ವೇಷ ಅಸೂಯೆಗಳು ಕೆರಳುತ್ತವೆ; ಸರಸ ವಿರಸವಾಗುತ್ತದೆ; ಸುಸಂಸ್ಕೃತರೂ ಅನಾಗರಿಕರೂ ಒಟ್ಟಿಗೆ ಬಾಳ ಬೇಕಾಗುತ್ತದೆ. ಮಾನವತೆಯ ಭಿನ್ನ ಭಿನ್ನ ವಿಭಾಗಗಳನ್ನು ಮತ್ತು ಪ್ರಕೃತಿ ವಿಶೇಷಗಳನ್ನಿಲ್ಲಿ ಕಾಣಬಹುದಾಗಿದೆ. ಚಿಕ್ಕ ಜಗತ್ತನ್ನೇ ನೋಡಬಹುದಾಗಿದೆ. ಕೇವಲ ಬಾಡಿಗೆ ಆಸೆಯ ಮನೆಯೊಡತಿ ರಂಗಮ್ಮನಲ್ಲೂ ಮಾನವೀಯ ಅನುಕಂಪ, ಸಹಾನುಭೂತಿ, ಸುಖದ ಹಾರೈಕೆ ಮತ್ತು ಕಷ್ಟ ಕಾಲದಲ್ಲಿ ನೆರವಾಗುವ ಬುದ್ಧಿ ಇರುವುದೆಂಬುದನ್ನೂ ಲೇಖಕರು ತೋರಿಸಿದ್ದಾರೆ. ವಠಾರ ಜೀವನದಲ್ಲಿ ಎಲ್ಲ ಬಗೆಯ ಜನರ ಪ್ರತಿಬಿಂಬವನ್ನೂ ಕಾಣಬಹುದಾಗಿದೆ.
ಈ ಸಂಗ್ರಹಾರ್ಹ ಕಾದಂಬರಿ ಕೆಲವೆಡೆ ಬರುವ ಕೋಮುವಾರು ಪ್ರಸ್ತಾಪಗಳಿಲ್ಲದೆಯೇ ಸಾಗಬಹುದಾಗಿತ್ತು; ದಿನಕ್ಕೆ ಮೂರೇ ಕೊಡ ನೀರಿನಲ್ಲಿ ಒಂದೊಂದು ಕುಟುಂಬವೂ ಕಾಲ ಹಾಕುತ್ತಿತ್ತೆಂದು (ಬಾವಿಯ ಸೌಕರ್‍ಯದ ವ್ಯವಸ್ಥೆಯೇನನ್ನೂ ಕಲ್ಪಿಸದೆ!) ಹೇಳುವುದು ವಿಪರೀತ ಉತ್ಪ್ರೇಕ್ಷೆಯೆನ್ನಬೇಕು. ಪುಸ್ತಕದಲ್ಲಿ ಬರುವ ಸಂವಾದಾತ್ಮಕ ಹಿನ್ನುಡಿ ಬಹಳ ಉದ್ದವಾಯಿತೆಂದೇ ಹೇಳಬೇಕಾಗಿದೆ; ಪ್ರತಿಯೊಂದು ಪುಸ್ತಕದಲ್ಲೂ ಇದೇ ಬಗೆಯ ಪೀಠಿಕಾ ತಂತ್ರವನ್ನು ಉಪಯೋಗಿಸತೊಡಗಿದರೆ, ಇದು ಅಪ್ರತ್ಯಕ್ಷ ಆತ್ಮ ಪ್ರಶಂಸೆಯ ವಿನೂತನ ವಿಧಾನವೋ ಎಂಬ ಅನುಮಾನವನ್ನು ಓದುಗರಲ್ಲಿ ಮೂಡಿಸಿದರೂ ಅಚ್ಚರಿಯಿಲ್ಲ.
- ‘ಪುಸ್ತಕಪ್ರಿಯ’ತಾಯಿನಾಡು, ‘ಪ್ರಕಟಣ ಪ್ರಪಂಚ’ ಅಂಕಣ; 25-9-1954
Your Review of 'Rangammana Vathara' is very good. Shivarao has decided to drop the last 'Conversation-Chapter' (Self-introduction to Novel) in his future Novels. Congratulations.
Nadig 27-9-1954
[ಇಂಥ ವಿಮರ್ಶೆ ಮತ್ತು ಪರಾಮರ್ಶೆಗಳು ನಾಡಿಗ್-ನಿರಂಜನ-ನಾಗೇಶರಾವ್ ಅವರ ಸ್ನೇಹ ಸಂಬಂಧಗಳಿಗೆ ಯಾವುದೇ ಚ್ಯುತಿ ತಂದಿರಲಿಲ್ಲ.]
No comments:
Post a Comment