ಸುದ್ದಿಜೀವಿ

ಸುದ್ದಿಜೀವಿ
ನಾಗೇಶರಾವ್

Saturday, March 31, 2007

An Editorial for the new Kannada Tabloid
ಐವತ್ತರ ದಶಕದಲ್ಲಿ ಹೆಚ್. ರಾಮಸ್ವಾಮಿಯವರ ಸಂಪಾದಕತ್ವದಲ್ಲಿ ವಾರಕ್ಕೆರಡು ಬಾರಿ ಹೊರಬರುತ್ತಿದ್ದ ’ಜ್ವಾಲಾಮುಖಿ’ ಪತ್ರಿಕೆ ಅಂದಿನ ದಿನಗಳಲ್ಲಿ ’ಕಿಡಿ’ ಪತ್ರಿಕೆಯಷ್ಟೇ ಪ್ರಖರವಾಗಿ ರಾಜಕಾರಣಿಗಳನ್ನು ಸುಡುತ್ತಿತ್ತು. ಸ್ನೇಹಕ್ಕೆ ಕಟ್ಟುಬಿದ್ದು ‘ಕಿಡಿ’ ಸೇರಿದಂತೆ ಅದೆಷ್ಟೋ ಪತ್ರಿಕೆ/ನಿಯತಕಾಲಿಕಗಳಿಗೆ ಸಂಪಾದಕೀಯ ಮತ್ತು ಲೇಖನಗಳನ್ನು ಬರೆದುಕೊಡುತ್ತಿದ್ದರು ನಾಗೇಶರಾಯರು. 1953ರ ಅಕ್ಟೋಬರ್ 11ರಂದು ಆರಂಭವಾದ ’ಜ್ವಾಲಾಮುಖಿ’ಯ ಮೊದಲ ಸಂಚಿಕೆಗೆ ಅವರು ಬರೆದುಕೊಟ್ಟ ಅಗ್ರಲೇಖನವಿದು.

ನಮ್ಮ ಮಾತು

"ಜ್ವಾಲಾಮುಖಿ"

ಹೌದು, ಜ್ವಾಲಾಮುಖಿ! ಬಡ ಜನತೆಯ ದುರವಸ್ಥೆಯ ಹೃದಯ ಗರ್ಭದಿಂದೇಳುವ ಕಷ್ಟ-ಸಂಕಷ್ಟಗಳ ಜ್ವಾಲಾಮುಖಿ! ಅನ್ಯಾಯ ಪರಂಪರೆಗಳಿಂದ ನಿಸ್ಸಹಾಯಕತೆಯ, ಸಾಮಾಜಿಕ ಏರುಪೇರುಗಳ ದುಷ್ಪರಿಣಾಮದ, ಅಸಮಾನತೆ, ಅವಮಾನಗಳ, ಆರ್ದ್ರತೆ-ಅವಲಂಬನೆಗಳ ನಿಟ್ಟುಸಿರ ಬೇಗೆಯನ್ನೂ ಕಂಬನಿಯ ಪ್ರವಾಹವನ್ನೂ ಹೊರ ಉಕ್ಕಿಸುವ ಜ್ವಾಲಾಮುಖಿ ನಮ್ಮ ಪತ್ರಿಕೆ.
ಪಟ್ಟ ಭದ್ರರ, ಅಧಿಕಾರಶಾಹಿಗಳ, ಮದೋನ್ಮತ್ತ ನಾಯಕರ, ಶ್ರೀಮಂತರ ದೌರ್ಜನ್ಯ-ಹಿಂಸೆ-ಕೋಟಲೆಗಳಿಗೆ ತುತ್ತಾಗಿ, ಪರಿಹಾರಮಾರ್ಗ ಕಾಣದೆ ಒದ್ದಾಡುವ ಮೂಕ ಜನ ಕೋಟಿಯ ಪರಿಶುದ್ಧಾತ್ಮದಿಂದೇಳುವ ನೋವಿನ ಮುಖಪತ್ರ, ಈ ’ಜ್ವಾಲಾಮುಖಿ’.

ದಲಿತರ, ದುರ್ಬಲರ, ಬಡವರ, ಶೋಷಿತರ, ನ್ಯಾಯವೇದಿಕೆ ಇದು. ಅನ್ಯಾಯವನ್ನು ಕಂಡಲ್ಲಿ ಅದನ್ನು ನಿರ್ದಾಕ್ಷಿಣ್ಯವಾಗಿ ಕೆಂಡದಂತೆ ಉಗುಳುವುದು. ನ್ಯಾಯ ಎಲ್ಲಿದೆಯೋ ಅದನ್ನು ನಿರ್ಭೀತಿಯಿಂದ ವ್ರತ ಪಡಿಸುವುದು, ಯಾರ ಹಂಗಿಗೂ ಒಳಗಾಗದೆ, ಯಾರ ನ್ಯಾಯಬದ್ಧ ಹಕ್ಕಿಗೂ ಧಕ್ಕೆ ತರದೆ, ಸತ್ಯಕ್ಕಾಗಿ, ಧರ್ಮಕ್ಕಾಗಿ-ಜನತಾ ಸುಖಕ್ಕಾಗಿ ಹೋರಾಡುವ ಜನತೆಯ ಪತ್ರಿಕೆಯಿದು.

ಹೊಸಯುಗದ ನಿರ್ಮಾಣಕ್ಕೆ, ಹೊಸ ಬಾಳ ಸ್ಥಾಪನೆಗೆ, ಹೊಸ ಜಗತ್ತಿನ ಪ್ರತಿಷ್ಠೆಗೆ ಕಂಕಣ ತೊಟ್ಟಿರುವ ಸೇವಾರ್ಥಿಗಳ ಉತ್ಸಾಹಿ ಉದ್ಯಮವಿದು. ಬಂಡವಾಳಗಾರರ ಬೆಂಬಲ ನಮಗಿಲ್ಲ; ಬಂಡವಾಳಶಾಹಿ ಆಕಾಂಕ್ಷೆಗಳಿಲ್ಲ. ಜನರ ಪ್ರೋತ್ಸಾಹ-ಅಭಿಮಾನಗಳೇ ನಮ್ಮ ಬಂಡವಾಳ; ಜನರ ಪ್ರೀತಿ-ಸೌಜನ್ಯವೇ ನಮ್ಮ ಶಕ್ತಿ. ಜನಪ್ರಿಯತೆಯೊಂದೇ ನಮ್ಮ ಆಧಾರ.
ಈ ಧರ್ಮಕಾಂಡಕ್ಕೆ, ನ್ಯಾಯದ ಜ್ವಾಲಾಮುಖಿಗೆ, ಕನ್ನಡಿಗರೆಲ್ಲರ ಸಹಾಯ-ಸಹಕಾರ-ಸಹಾನುಭೂತಿಗಳನ್ನು ಪ್ರಾರ್ಥಿಸುತ್ತೇವೆ. ಜನಸಾಮಾನ್ಯರ ಕಷ್ಟ-ದುಹ್ಖಗಳನ್ನರುಹುವ ಪತ್ರಗಳಿಗೂ ಲೇಖನಗಳಿಗೂ ’ಜ್ವಾಲಾಮುಖಿ’ಯಲ್ಲಿ ಸದಾ ಸ್ಥಳವಿದೆ!

ಜೈ ಹಿಂದ್!

No comments: