ಸುದ್ದಿಜೀವಿ

ಸುದ್ದಿಜೀವಿ
ನಾಗೇಶರಾವ್

Saturday, March 31, 2007

'Snehajeevi' on 'Suddijeevi'
MS Bharadwaj was a friendly person, thus said Khadri Shamanna (then editor of Kannadaprabha) in his editorial and the writer 'Niranjana' borrowed the same word while describing his friend. Bharadwaj started a second page editorial in his tabloid size weekly magazine titled 'Sampadakara Mejininda'. The 'Khasbaath' style of his writing was very popular. What he says about HRN in few of his editorials are extracted here.

’ಚಿತ್ರಗುಪ್ತ’ ಸಂಪಾದಕರ ಮೇಜಿನಿಂದ!

’ಚಿತ್ರಗುಪ್ತ’ಕ್ಕಾಗಿ ಬರೆಯಲು ಮುಂದೆ ಬಂದಿದ್ದಾರೆ ಇನ್ನೊಬ್ಬ ಮಿತ್ರರು ಶ್ರೀ ನಾಗೇಶರಾವ್- ವಿನೋದ ವಿಹಾರಕ್ಕೆ ಲೇಖನಗಳನ್ನು ಒದಗಿಸುತ್ತಿರುವ ’ಎನ್‍ಎ’. ’ತಾಯಿನಾಡು’ ಪತ್ರಿಕೆಯಲ್ಲಿ 8-10 ವರ್ಷಗಳಿಂದಲೂ ಶ್ರದ್ಧೆಯಿಂದ ದುಡಿಯುತ್ತಿರುವ ಈ ಮಿತ್ರರು ಪತ್ರಿಕೋದ್ಯೋಗಿಗಳ ಸಂಘದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ತಮಗೆ ಒಪ್ಪಿಸಿದ ಕೆಲಸವನ್ನು ಪೂರ್ಣ ಜವಾಬ್ದಾರಿಯಿಂದ ನಿರ್ವಹಿಸುವವರೆಗೂ ಇವರ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಅಂತೆಯೇ ಇವರ ಪಾಲಿಗೆ ಬರುವ ಜವಾಬ್ದಾರಿಗಳೂ ಹೆಚ್ಚು. ಆಸಾಮಿಯನ್ನು ನೋಡಿದರೆ ಮಾತ್ರ ಕಣ್ಣು ಕಣ್ಣು ಬಿಡಬೇಕಾದೀತು. ಅಂಥ ಕಡ್ಡಿ ಪೈಲ್ವಾನರು! ಲೇಖನಗಳ ಮಟ್ಟಿಗಷ್ಟೇ ಅಲ್ಲ, ತಮ್ಮ ಪೈಲ್ವಾನಗಿರಿಯಲ್ಲೂ ಎನ್‍ಎ ಮತ್ತು ಎಸ್.ಕೆ.ನಾಡಿಗ್ ಒಬ್ಬರನ್ನೊಬ್ಬರು ಮೀರಿಸುತ್ತಾರೆ. ಇಬ್ಬರ ಲೇಖನಗಳೂ ’ಚಿತ್ರಗುಪ್ತ’ದ ವಿನೋದ ವಿಹಾರಕ್ಕೆ ಮೀಸಲು. [3ನೇ ಜೂನ್ 1956]
00 00 00 00

"ನಮ್ಮ ಶುಭಾಶಯಗಳ ಸಂಕೇತವಾಗಿ ಈ ಚೆಕ್ ಸ್ವೀಕರಿಸಿ", ಎಂದು ಹೇಳಿ ತಾಯಿನಾಡು ಉಪಸಂಪಾದಕರಾದ ಶ್ರೀ ನಾಗೇಶರಾಯರು [ಎನ್‍ಎ] ಮುಂದೆ ಬಂದರು.

"ನೀವು ಲೇಖನಗಳನ್ನು ಬರೆಯುತ್ತಿದ್ದೀರಿ. ಹೇಗಿದ್ದರೂ ನಿಮಗೊಂದು ಪ್ರತಿ ಬಂದೇ ಬರುತ್ತದೆ. ನೀವೇಕೆ ಚಂದಾಹಣ ಕೊಡಬೇಕು. ಬೇಡಿ", ಎಂದು ಹೇಳಿದರೂ ಒಪ್ಪದೇಹೋದ ವ್ಯಕ್ತಿ ಅವರು. ಹೀಗಾಗಿ, ಚಿತ್ರಗುಪ್ತದ ಹೊಸ ರಸೀದಿ ಪುಸ್ತಕದಲ್ಲಿ ಅವರದೇ ಮೊದಲ ಹಾಳೆ. [10ನೇ ಜೂನ್ 1956]
‘ಚಿತ್ರಗುಪ್ತ’ದ ವಾಚಕರಿಗೆ ‘ಎನ್‍ಎ’ ಎಂಬ ಹೆಸರು ಸುಪರಿಚಿತವಾದುದು. ಆ ‘ಎನ್‍ಎ’ಯವರೇ ಹೆಚ್.ಆರ್.ನಾಗೇಶರಾವ್. ಅವರ ಬರಹಗಳಲ್ಲಿ ನಾವು ಕಾಣುವುದು ಶುದ್ಧವಾದ ಲಘುಹಾಸ್ಯ. ಅದರೊಂದಿಗೆ ವಾಸ್ತವತೆಯ ವಿಡಂಬನೆಯನ್ನು ನೋಡಬಹುದು. ಆ ಹಾಸ್ಯದ ಹಿಂದೆ ಸತ್ಯದ ಚಿತ್ರಣವೂ ಇರಬಹುದು. ‘ರೆಡ್ ಟೇಪಿಸಂ ಗೆಲ್ಗೆ’, ‘ಮುಂದಿನ ನೆಹ್ರೂ ನಾನೇ’, ‘ಅಖಿಲ ಭಾರತ ಅಳಿಯಂದಿರ ಸಮ್ಮೇಳನ’ ಇವುಗಳನ್ನು ತಕ್ಷಣವೇ ಇಲ್ಲಿ ಹೆಸರಿಸಬಹುದು. ಪುಟ್ಟ ಪುಸ್ತಕದ ಹೆಸರು ‘ನಗೆ-ಬಾಂಬು’ ಎಂದಿದ್ದರೂ ಇಲ್ಲಿರುವುದು ಹುಚ್ಚು ‘ನಗೆ-ಬಾಂಬು’ ಅಲ್ಲ. ಲೇಖನಗಳಿಗೊಂದು ಗಾಂಭೀರ್ಯವಿದೆ. ಕೆಲವು ಬಲು ಕ್ರೂರವಾದವು. ಅಂಥವಕ್ಕೆ ‘ನೀವೆಂಥ ಗಾಂಧಿ ಭಕ್ತರು?’ ಎಂದು ನೋಡಬೇಕು. ‘ನಿಮ್ಮ ಹೆಂಡತಿಯೊಡನೆ ಜಗಳ ಆಡಿ!’ ಒಂದು ಉತ್ತಮ ಲಘು ಹಾಸ್ಯದ ಬರಹ.

ಗಾಳಿ ಬಿಟ್ಟರೆ ತೂರಿಕೊಂಡು ಹೋಗುವಂತೆ ಲಘುವಾಗಿರುವ ‘ಎನ್‍ಎ’ ತಾವೊಬ್ಬ ಉತ್ತಮ ಲಘು ಲೇಖಕರೆಂಬುದನ್ನೂ ಎಂದೋ ತೋರಿಸಿ ಕೊಟ್ಟಿದ್ದಾರೆ. ಅವರಿಂದ ನಮ್ಮ ಲಘು ಸಾಹಿತ್ಯಕ್ಕೆ ಇನ್ನು ಹೆಚ್ಚಿನ ಹಾಗೂ ಉತ್ತಮ ಮಟ್ಟದ ಸೇವೆ ಸಲ್ಲಬೇಕಾಗಿದೆ. ತಮ್ಮ ಪಾಲಿನ ಈ ಕಾರ್ಯವನ್ನು ಅವರು ಪೂರೈಸುತ್ತಾರೆಂದೂ ನಾವು ನಂಬಿದ್ದೇವೆ.

- ಎಂ.ಎಸ್.ಭಾರದ್ವಾಜ್‘
ಪುಸ್ತಕ ಪ್ರಪಂಚ’ ಅಂಕಣ,
‘ಚಿತ್ರಗುಪ್ತ’ [14-4-1957]

No comments: