ತುಮಕೂರು ಇಂಟರ್‌ಮೀಡಿಯಟ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಜಿ.ಪಿ.ರಾಜರತ್ನಂ, 1943ರ ಜುಲೈ ತಿಂಗಳ ಮೂರನೆಯ ವಾರ `ಪ್ರೊಫೆಸರ್ ವೆಂಕಣ್ಣಯ್ಯ ವ್ಯಾಸಂಗ ಗೋಷ್ಠಿ' ಎಂಬ ಒಂದು ಕನ್ನಡ ಅಭ್ಯಾಸ ಕೂಟ ಆರಂಭಿಸಿದ್ದರು. ಈ ಸಂದರ್ಭದಲ್ಲಿ ನಡೆಸಿದ ವಿವಿಧ ಸ್ಫರ್ಧೆಗಳಲ್ಲಿ ಬಹುಮಾನ ಗಳಿಸಿದ್ದ `ಮರಿ' ವಿದ್ಯಾರ್ಥಿಗಳ ಗದ್ಯ ಸಂಗ್ರಹವೊಂದನ್ನು `ವಿದ್ಯಾರ್ಥಿ ವಿಚಾರ ವಿಲಾಸ' ಎಂಬ ಹೆಸರಿನಲ್ಲಿ 1944ರಲ್ಲಿ ಪ್ರಕಟಿಸಿದ್ದರು. 21 ಲೇಖನಗಳಿದ್ದ ಆ ಸಂಕಲನದಲ್ಲಿ ಇಂಟರ್‌ಮೀಡಿಯಟ್ ವಿದ್ಯಾರ್ಥಿ ನಾಗೇಶರಾವ್ ಅವರದ್ದೇ 6 ಬರಹಗಳು ಪ್ರಕಟವಾಗಿದ್ದವು. ಅವುಗಳಲ್ಲೊಂದಾದ ಈ ಲೇಖನ, ನಾಗೇಶರಾಯರ ಮೊದಲ ಪ್ರಕಟಿತ ಬರಹ. ಮುಂದೆ ಹಲವಾರು ಪತ್ರಿಕೆಗಳಲ್ಲಿ ಜಗದ್ವಿಖ್ಯಾತ ವ್ಯಕ್ತಿಗಳೊಂದಿಗೆ ಕಾಲ್ಪನಿಕ ಸಂದರ್ಶನ ಬರಹಗಳನ್ನು ರಚಿಸುವುದಕ್ಕೆ ಈ ಪ್ರಕಟನೆ ನಾಂದಿಯಾಯಿತು. - ಸಂ.
________________________________________
ಗಾಂಧೀಜಿಯೊಡನೆ ಒಂದು ಗಂಟೆ
- ಹಾ.ರಂ.ನಾಗೇಶರಾವ್
ಗಾಂಧೀಜಿ ನನ್ನ ಬಳಿ ಬರುತ್ತಾರೆ.
ನಾನವರನ್ನು ಮಾತನಾಡಿಸ ಹೋಗುವೆ. ನನಗೆ ಮಾತೇ ಬಾರದು. ಗಾಂಧೀಜಿ ಸಿಕ್ಕರೆ ಸಾಕು, ಅವರನ್ನು ವಾದದಲ್ಲಿ ಕೆಡಹುವೆ ಎಂದೆನ್ನುತ್ತಿದ್ದ ನಾನು, ಅವರೇ ಬಂದು ನನ್ನ ಮುಂದೆ ನಿಂತಿದ್ದಾರೆ, ಮಾತನಾಡಲರಿಯೆ.
ಕೆಲವು ನಿಮಿಷ ಹೀಗೆಯೇ. ಕೊನೆಗೆ ಆ ವ್ಯಕ್ತಿ ನುಡಿಯುತ್ತದೆ: `ಮಾತಾಡು, ಭಯವೇಕೆ?' ಆ ಮಾತಿನೊಡನೊಂದು ಸ್ಫೂರ್ತಿ ಬಂತು. ನಾನೆಂದೆ `ಬಾಪೂಜೀ!'
`ಏನು?'
`ಮೊನ್ನೆ ತಾನೇ ಮಹೋಪವಾಸ ಮಾಡಿದಿರಲ್ಲಾ, ಅದರ ಫಲವೇನು ಬಂತು?'
ಬಾಪೂಜಿ ನಕ್ಕರು: `ಫಲವೆಂದರೇನು?'
`ಈ ಉಪವಾಸದಿಂದ ನಿಮ್ಮೆಲ್ಲರ ಬಿಡುಗಡೆಯಾಗುವುದೆಂದು ದೇಶ ಹಂಬಲಿಸಿತ್ತು'.
`ಹಾಗಾದರೆ ಬಿಡುಗಡೆಯೇ ಫಲವೆಂದೆಣಿಸಿದೆಯಾ? ನನ್ನ ಸುತ್ತ ನೂರಾರು ಪಾತಕಗಳ ರಾಶಿ ತುಂಬಿತ್ತು. ಅಮೆರಿಕದ ಕೇಳಿಕೆ, ಭಾರತ ಸರ್ಕಾರದ `ಐವತ್ತು ಸತ್ಯಗಳು', ಚಳುವಳಿಯ ಪಾತಕದ ಹೊಣೆ, ಇವೆಲ್ಲಾ ನನ್ನ ಸುತ್ತುವರಿದು ನಿಂತು ನಾನೇ ಪಾತಕದ ಕೂಪವೆಂದು ಇಂಗ್ಲೆಂಡಿನ, ಅಮೆರಿಕದ ಜನ ತಿಳಿದರು. ಈ ಪಾತಕದ ರಾಶಿಯಿಂದ ನಾನೆದ್ದು ಬರಲೆ? ಇಲ್ಲವೆ `ಪಾತಕದ ಕೂಪ'ವಾಗೇ ಉಳಿದಿರಲೆ? ಈ ಪಾತಕದ ರಾಶಿಯನ್ನು ಸುಟ್ಟು ಬೂದಿಮಾಡು ಎಂದಿತು ಮನಸ್ಸು. ಅದೊಂದೇ ಧ್ಯೇಯದಿಂದ ಈ ಉಪವಾಸ ಮಾಡಿದೆ. ನನ್ನ ಸುತ್ತಣ ಪಾಪ ಸುಟ್ಟು ಹಾರಿಹೋಯಿತು. ಈಗಲಾದರೂ ಅಲ್ಲಿನ ಜನ ಗಾಂಧೀ ಸತ್ಯಯೋಧ ಎಂದಾರು. ಅವನಲ್ಲ ಪಾಪಿ, ಎಂದು ತಿಳಿದಾರು. ಇದಕ್ಕಿಂತ ಫಲ ಬೇಕೇ?'
ಏನೋ ನನಗೆ ತೋಚಲಿಲ್ಲ. ಮತ್ತೆ ನಾನೆಂದೆ: `ಬಾಪೂಜೀ'
`ಏನು?'
`ಹಾಗಾದರೆ ಈ ಪಾತಕವನ್ನು ನಿಮ್ಮ ಮೇಲೆ ಹೊರಿಸಿದವರಾರು?'
`ನಾ ನಂಬಿದ ನನ್ನ ಜನ. ನಾ ಬೆವರು ಸುರಿಸಿದ ನನ್ನ ಜನ. ಯಾರ ಎದೆಯ ಮೇಲೆ ಕೈಯಿಟ್ಟು, ಅದರ ಬಡಿತವನ್ನು ಲೆಕ್ಕಿಸದೆ, ಸ್ವಾತಂತ್ರ್ಯ ಯುದ್ಧಕ್ಕೆ ಮುನ್ನುಗ್ಗಿರೆಂದು ಉಪದೇಶಿಸಿದೆನೋ ಅದೇ ನನ್ನವರು, ನನ್ನ ಅಣ್ಣ ತಮ್ಮಂದಿರು, ಬಂಧು ಭಗಿನಿಯರು ಈ ಪಾಪದ ಕೂಪವಾಗಿ ಮಾಡಿದರು ನನ್ನನ್ನು. ನಾ ಹೇಳಿದ ದಾರಿ ತಪ್ಪಿದರು. ನಾನಿತ್ತ ಉಪದೇಶ ಮರೆತರು. ಹಿಂಸೆಗೆ ಕೈ ಹಾಕಿ, ಕೊಲೆಗಡುಕತನ ನಡೆಸಿ, ಪಾಪಭೀತಿಯಿಲ್ಲದೆ ನನಗೆ ಆ ರಕ್ತದ ಕಲೆ ಹಚ್ಚಿದರು. ಆ ಕಲೆಯನ್ನು ಕಂಡ ನನ್ನ ಅಮೆರಿಕದ, ಇಂಗ್ಲೆಂಡಿನ ಬಾಂಧವರು ನಾನೇ ಕೊಲೆಗಡುಕ ಎಂದರು. ಅದಕ್ಕಾಗಿ ನಾನು ಪ್ರಾಯೋಪದೇಶ ಮಾಡಿದೆ. ನನ್ನವರು ಮಾಡಿದ ಅಪರಾಧಕ್ಕಾಗಿ ನಾನೇ ಶಿಕ್ಷಿಸಿಕೊಂಡೆ. ಸತ್ಯಕ್ಕಾಗಿ ಸತ್ತ ಯೇಸುಕ್ರಿಸ್ತ ಗೋರಿಯಿಂದ ಎದ್ದ. ಸತ್ಯ ಎಂದೂ ಸೋಲದು. ನಾನವನ ಮಾರ್ಗ ಅನುಸರಿಸಿದೆ. ಕೆಟ್ಟವರ ತಪ್ಪಿಗಾಗಿ ನಾನೇ ಕೆನ್ನೆಗೆ ಹೊಡೆದುಕೊಂಡೆ. ಈಗಲಾದರೂ ನನ್ನವರು ನೆನೆಸಿರಬಹುದು: ಇಂತಹ ತಪ್ಪು ಇನ್ನೆಂದಿಗೂ ಮಾಡೆವೆಂದು.'
`ಹಾಗಾದರೆ ಬಾಪೂಜೀ, ನಿಮ್ಮ ವ್ರತ ಪೂರ್ಣ ಜಯಪ್ರದವಾಯಿತು. ಲೋಕ ನಿಮ್ಮನ್ನು ತಪ್ಪೆಂದ ಪಾಪಿಗಳನ್ನು ದೂಷಿಸಿತು.'
`ನಾನರಿತೆ. ಮುಂದೆ ನನ್ನ ಜನ, ಭಾರತವೆಲ್ಲ `ಅನ್ನ, ಅನ್ನ' ಎನ್ನುತ್ತಾ ನರಳಿ ಕೂಗಿಯಾರು, ಸೊರಗಿ ಸತ್ತಾರು. ನಾನವರಿಗೇನು ಮಾಡಬಲ್ಲೆ? ಅವರು ಮಾಡಿದ ಪಾಪ ಬಹಳವಿತ್ತು. ಭಗವಂತನಿಗೆ ಈ ಪಾಪ ಸಹಿಸದಾಯಿತು. ದೊಡ್ಡ ಅನ್ನಕ್ಷಾಮ ಕಳುಹಿಸಿದ ದೇವರು. ಆ ಪಾಪರಾಶಿಯಲ್ಲಿ ಒಂದು ಸಾಸಿವೆಯ ಕಾಳಿನಷ್ಟಾದರೂ ಹರಿದರೆ ನನ್ನ ಜನ ಬದುಕಿಯಾರು, ಅನ್ನ ಕಂಡಾರು ಎಂಬ ನಂಬುಗೆಯಿತ್ತು ನನಗೆ. ಆ ಸಾಸಿವೆಯ ಕಾಳಷ್ಟಾದರೂ ತೀರಲೆಂಬ ಬಯಕೆಯಿಂದ ಉಪವಾಸ ಮಾಡಿದೆ ನಾನು.'
ಇದ್ದಕ್ಕಿದ್ದಂತೆ ಬಾಪೂಜಿ ಆವೇಶಗೊಳ್ಳುವರು. ಅವರ ಮುಖ ಕೆಂಪಾಗುವುದು. ಅವರ ದನಿ ಕುಂಠಿತವಾಗುವುದು. ತೀವ್ರ ವೇದನೆಯನ್ನು ತಡೆಯಲಾರದೆ ನುಡಿವಂತಹ ದನಿಯಲ್ಲಿ ಅವರೆನ್ನುವರು: `ಏನಾದರೂ ನನಗೆ ಶಾಂತಿಯಿಲ್ಲ. ನನ್ನ ಹೃದಯದ ತಳಮಳ ನಿಲ್ಲುವಂತಿಲ್ಲ.'
`ಅದೇಕೆ, ಬಾಪೂಜಿ?'
`ಹೇಗೆ ತಾನೇ ನನ್ನ ಮನಸ್ಸು ಶಾಂತವಾದೀತು ನೀನೇ ಹೇಳು. ನನ್ನ ನೆಚ್ಚಿನ ಭಕ್ತರು, ಅಚ್ಚುಮೆಚ್ಚಿನ ಶಿಷ್ಯರು ಸೆರೆಮನೆಯಲ್ಲಿ ಕೊಳೆಯುತ್ತಿರುವಾಗ, ನನ್ನ ಪ್ರಾಣಾಪ್ತರು ನರಳುತ್ತಿರುವಾಗ, ನನ್ನ ನಾಡೆಲ್ಲ ಕಂದಿ, ಕುಂದಿ, ಕನಲುತ್ತಿರುವಾಗ; ನನ್ನ ಜನ ವಿಧಿಯ ದಬ್ಬಾಳಿಕೆಗೆ ಸಿಲುಕಿ ಸಾಯುತ್ತಿರುವಾಗ ನನ್ನ ಹೃದಯ ಸಮಾಧಾನವಾಗಿ ಹೇಗೆ ತಾನೇ ಇದ್ದೀತು? ನೀನೇ ಹೇಳು.'
ನಾ ಸುಮ್ಮನಿದ್ದೆ.
`ನನ್ನ ನಲವತ್ತು ಕೋಟಿ ಬಾಂಧವರು ಎಲ್ಲ ಕೋಟಲೆಗಳಿಗೂ ಸಿಕ್ಕಿ ನಲುಗಿಹೋಗಿದ್ದಾರೆ. ನಮ್ಮ ಭಾರತಭೂಮಿಯ ಮೇಲೆ ಪ್ರಕೃತಿ ಮಾತೆ ರೊಚ್ಚಿಗೆದ್ದಿದ್ದಾಳೆ. ಎಲ್ಲಿ ನೋಡಿದರೂ ತೆರವು; ಎತ್ತ ನೋಡಿದರೂ ಬಯಲು; ಯಾವ ಕಡೆ ನೋಡಿದರೂ ಭೀಕರಕ್ಷಾಮ. ಬಂಗಾಳದ ಬೀದಿಬೀದಿಗಳಲ್ಲಿ ಸತ್ತವರ ಪ್ರೇತಗಳು ನನ್ನನ್ನು ಮಲಗಗೊಡವು, ಏಳಗೊಡವು, ಕೂಡಗೊಡವು. ಅಷ್ಟು ಜನ ಹೊಟ್ಟೆಗಿಲ್ಲದೆ ಸತ್ತಾಗ ನಾನು ಧೈರ್ಯವಾಗಿ, ಸುಖವಾಗಿ ಅನ್ನ ತಿನ್ನಲೇನು? ಹಾಗೆ ನಾನು ತಿಂದ ಅನ್ನ ಎಷ್ಟು ಜನರ ಹೊಟ್ಟೆಯಿಂದ ಕಿತ್ತುಕೊಂಡುದು ನೀನೇ ಹೇಳು.'
`ಹಾಗಾದರೆ ಸುಖವಾಗಿ ಉಂಡುಟ್ಟು ತಿರುಗುವ ನಾನು ಎಂತಹ ಪಾಪಿಯೆಂದೆನಿಸಿತು ನನಗೆ.'
`ನಾ ಹೇಳಿದಾಗ ನನ್ನವರು ಕೇಳಲಿಲ್ಲ. ನನ್ನನ್ನೇ ದೂಷಿಸಿದರು. ಪ್ರತಿಯೊಬ್ಬನೂ ದಿನಕ್ಕೊಂದು ಹೊಸ ಬಟ್ಟೆಯನ್ನು ನೇಯಿರಿ ಎಂದಾಗ ಅವರು ನನ್ನನ್ನು ಹೀಯಾಳಿಸಿದರು. ಇಂದಾದರೋ ಅವರು ಉಡಲು ಬಟ್ಟೆಯಿಲ್ಲದೆ ಅಲೆಯುತ್ತಿದ್ದಾರೆ. ಬೆತ್ತಲೆ ಮೈ, ಬತ್ತಿದ ಹೊಟ್ಟೆ ಇಟ್ಟುಕೊಂಡು ಭೂಮಿಗೆ ಭಾರವಾಗುತ್ತಿದ್ದಾರೆ. ಇದನ್ನೆಲ್ಲಾ ನೋಡಿ ನಾನು ಹೇಗೆ ತಾನೆ ಸುಮ್ಮನಿರಲಿ?'
`ಇವೆಲ್ಲಾ ಹೇಗೆ ಅರಿತಿರಿ ನೀವು, ಬಾಪೂಜಿ?' ಎಂದೆ.
`ಏಕೆ, ಸೆರೆಮನೆಯಲ್ಲಿ ನನಗೆ ಸರ್ಕಾರ ಪತ್ರಿಕೆಗಳನ್ನು ಕೊಡುವುದಿಲ್ಲವೇನು? `ಸ್ಟೇಟ್ಸ್‍ಮನ್' ಪತ್ರಿಕೆಯಲ್ಲಿ ಪ್ರಕಟವಾದ ಬರಗಾಲದ ಭೀಕರ ಚಿತ್ರಗಳನ್ನು ನಾನು ನೋಡಿಲ್ಲವೆಂದೆಣಿಸಿದೆಯಾ ನೀನು? ನಾನೆಲ್ಲವನ್ನೂ ನೋಡಿದ್ದೇನೆ, ಎಲ್ಲವನ್ನೂ ಓದಿದ್ದೇನೆ, ಎಲ್ಲವನ್ನೂ ಅರಿತಿದ್ದೇನೆ. ನನ್ನವರ ಹೊಟ್ಟೆ ಎಷ್ಟು ಹಸಿದಿದೆಯೋ ಅಷ್ಟೇ ನಾನೂ ಹಸಿದಿದ್ದೇನೆ. ಅವರೆಷ್ಟು ಬೆತ್ತಲೆಯೋ ನಾನೂ ಅಷ್ಟು ಬೆತ್ತಲೆಯಾಗಿದ್ದೇನೆ. ಇಲ್ಲದಿದ್ದರೆ ಈ ಕ್ಷಾಮದ ಅರಿವಾದರೂ ನನಗೆಂತು ಆಗಬೇಕು?'
`ಸೆರೆಯಲ್ಲಿ ನಿಮಗೆ ಬೇಕಾದುದು ದೊರೆತಿಲ್ಲವೇ ಬಾಪೂಜಿ?'
`ಸೆರೆಯಲ್ಲಿ ದೊರಕಲಿ, ಬಿಡಲಿ, ನನಗಂತೂ ಅದು ಬೇಡ. ನನ್ನ ಜನಕ್ಕೆ ಹಸಿದ ಹೊಟ್ಟೆಗೆ ತುತ್ತು ಹಿಟ್ಟು ಬೇಕೆಂದರೆ ಅದನ್ನು ಕೊಡದಷ್ಟು ಅಸಮರ್ಥವಾಗಿದೆ ನಮ್ಮ ಜನ್ಮಭೂಮಿ. ಶೇಖರಿಸಿದ ಹಣವಂತರ ಕೋಠಿಗಳು ಬಡಜನರ ಹಸಿವಿನ ಜ್ವಾಲೆಗೆ ಸಿಕ್ಕಿ ಉರಿದು ಹೋಗುವವರೆಗೂ ನನಗದೆಲ್ಲಿಯ ಶಾಂತಿ? ಅದೆಲ್ಲಿಯ ಊಟ?'
`ಸರ್ಕಾರ ಇಂದು ಸಾಕಷ್ಟು ಕೆಲಸ ಮಾಡುತ್ತಿಲ್ಲವೇ ಬಾಪೂಜಿ? ಜನಕ್ಕೆ ಆದಷ್ಟು ಮಟ್ಟಿಗೆ ಹೊಟ್ಟೆ ತುಂಬುವ ಕಾರ್ಯವನ್ನು ಕೈಕೊಂಡಿಲ್ಲವೇ?'
`ನಿಜ. ಆದರೆ ಅಷ್ಟು ಮಾತ್ರ ಸಾಲದು. ಹಸಿದ ಹೊಟ್ಟೆಗೆ ಒಣಸಮ್ಮೇಳನದ ಚರ್ಚೆಗಳನ್ನು ತಂದುಕೊಟ್ಟರೆ ಏನು ತಾನೆ ಆಯಿತು? ದಿನ ದಿನವೂ ವೃತ್ತಪತ್ರಿಕೆಗಳಲ್ಲಿ ಒಣ ಚರ್ಚೆಗಳನ್ನೂ ಹೇಳಿಕೆಗಳನ್ನೂ ಓದುತ್ತಾ ಇದ್ದರೆ ಬಡಬಗ್ಗರ ಹೊಟ್ಟೆ ತುಂಬುವುದೇ? ಮಾತು ಕೃತಿಯಲ್ಲಿರಬೇಕು. ಹೃದಯದಲ್ಲಿದ್ದರೆ ಸಾಲದು. ಇವೆಲ್ಲಕ್ಕಿಂತ .....'
`ನೀವಾಗಿದ್ದರೆ ಇದಕ್ಕಾಗಿ ಏನು ಮಾಡುತ್ತಿದ್ದಿರಿ?' ಎಂದು ನಾ ಕೇಳಿದೆ.
`ನಾನೇನು ಮಾಡುತ್ತಿದ್ದೆನೋ ಈಗ ಹೇಳಿ ತಾನೇ ಪ್ರಯೋಜನವೇನು?'
`ನೀವು ಹೇಳಿದರೆ ಉಳಿದವರಿಗೆ ದಾರಿ ತೋರಿದಂತಾಗಲಿಲ್ಲವೆ, ಬಾಪೂಜಿ?'
`ಹಾಗಾದರೆ, ಕೇಳು ಹಸಿದ ಹೊಟ್ಟೆಯ ಎಲ್ಲರಿಗೂ ಒಂದು ಕೆಲಸ ಕೊಡುತ್ತಿದ್ದೆ. ನೂಲಿರೆಂದು ಹೇಳುತ್ತಿದ್ದೆ. ಧಾನ್ಯವನ್ನು ಕೂಡಿಟ್ಟು ಕೊಬ್ಬಿದ ಧನಿಕರ, ದಾಸ್ತಾನುಗಾರರ ಮನೆಯ ಬಳಿಗೆ ಹಸಿದವರನ್ನು ಗುಂಪುಕಟ್ಟಿ ಕರೆದುಕೊಂಡು ಹೋಗುತ್ತಿದ್ದೆ. `ನಿಮಗೆ ಸಾಕಷ್ಟು ಇಟ್ಟುಕೊಂಡು ಉಳಿದವನ್ನು ಬಡಬಗ್ಗರಿಗೆ ಹಂಚುವವರೆಗೂ ನಾವು ನಿಮ್ಮ ಮನೆ ಬಿಟ್ಟು ಕದಲೆವು. ಸತ್ತರೆ ಇಲ್ಲೇ ಸತ್ತೇವು' ಎಂಬ ಪ್ರತಿಜ್ಞೆಯನ್ನು ಘೋಷಿಸಿ ದೊಡ್ಡ ಅನ್ನ ಸತ್ಯಾಗ್ರಹ ನಡೆಸುತ್ತಿದ್ದೆ. ಹರಿಜನ ಸಹಾಯನಿಧಿಗೆ ಭಾರತವನ್ನೆಲ್ಲಾ ಸುತ್ತಿ ನಿಧಿ ಕೂಡಿಸಿದಂತೆ, ಈ ಆಹಾರಕ್ಕೂ ಊರೂರು ತಿರುಗಿ ಧಾನ್ಯವನ್ನು ಕೂಡಿಹಾಕುತ್ತಿದ್ದೆ. ಜನರು ಎದುವರೆಗೂ ಹಸಿವು ತಡೆಯಬಲ್ಲರೋ ಅದುವರೆಗೂ ಉಪವಾಸವಿದ್ದು, ಇನ್ನು ಊಟ ಮಾಡದಿದ್ದರೆ ಸಾಗದು ಎನಿಸಿದಾಗಲೇ ಊಟ ಮಾಡಬೇಕೆಂದು ಬೋಧಿಸುತ್ತಿದ್ದೆ. ಹೆಚ್ಚಿಗೆ ತಿಂಡಿಗಳು ಅನಾವಶ್ಯಕ. ದೇಶದ ಕಲ್ಯಾಣಕ್ಕಾಗಿ ಆಹಾರ ವಸ್ತುಗಳನ್ನು ಮಿಗಿಸಿ ಎಂದು ಜನಕ್ಕೆ ಉಪದೇಶಿಸುತ್ತಿದ್ದೆ. ಇಂದಲ್ಲದೆ ಹೋಡರೆ ನಮ್ಮ ಜನ ಆಹಾರ ಸಂಯಮ ಕಲಿವುದಾದರೂ ಎಂದು? ಹೊಟ್ಟೆಯ ಕೂಗಿಗಾಗಿ ನನ್ನ ಜನ ನೂತ ನೂಲು, ನೇದ ಬಟ್ಟೆ ಭಾರತದ ಎಲ್ಲರಿಗೂ ಸಾಕಾಗುವಷ್ಟು ಆಗುತ್ತಿತ್ತು. ಇಂದಿನ `ಸ್ಟಾಂಡರ್ಡ್ ಕ್ಲಾತ್' ಗೊಂದಲವಿಲ್ಲದೆಯೇ ಯಂತ್ರಕ್ಕೆ ಹೊಟ್ಟೆ ತುಂಬಿಸದೆ, ಬಡ ಕೈಗಳೈಗೆ ಅನ್ನ ನೀಡುತ್ತಿದ್ದೆ; ಜನಕ್ಕೆಲ್ಲಾ ಬಟ್ಟೆಯೊದಗಿಸುತ್ತಿದ್ದೆ. ಆದರೆ ಅಷ್ಟೆಲ್ಲಾ ಮಾಡುವವರು ತಾನೇ ಯಾರು ಈಗ? ಅವರನ್ನು ತಾವೇ ತಾವಾಗಿ ಬಿಟ್ಟುಬಿಟ್ಟರೆ ಚಳುವಳಿಯಲ್ಲಿ ನನ್ನ ಮುಖಕ್ಕೆ ಮಂಗಳಾರತಿ ಎತ್ತಿದಂತೆ ಇದರಲ್ಲೂ ಎತ್ತಿಬಿಟ್ಟಾರು. ಅದೇ ಭಯ ನನಗೆ. ಅದೇ ಯೋಚನೆ ಸದಾ. ಇನ್ನು ನನ್ನ ಆತ್ಮಕ್ಕೆ ಸುಖವೆಲ್ಲಿಂದ ಬರಬೇಕು?'
`ನಿಜವಾಗಿಯೂ ನೀವು ದರಿದ್ರನಾರಾಯಣರು ಬಾಪೂಜಿ.'
ಬಾಪೂಜಿ ಗಹಗಹಿಸಿ ನಕ್ಕರು:
`ಅಯ್ಯೋ ಹುಚ್ಚೇ! ನಾನು ಇದುವರೆಗೂ ಹೇಳಿದುದೆಲ್ಲಾ ಬರೀ ಮಾತು. ನಾನೊಂದನ್ನೂ ಸಾಧಿಸಿಯೇ ಇಲ್ಲ. ನನ್ನ ಅಭಿಪ್ರಾಯ ನಾನು ಹೇಳುತ್ತಾ ಇದ್ದೇನೆ. ಇಷ್ಟಕ್ಕಾಗಲೇ ನಾನು `ದರಿದ್ರನಾರಾಯಣ'ನಾಗಿ ಹೋದರೆ, ದೊಡ್ಡದಾಗಿ ಆಹಾರ ಸಮ್ಮೇಳನಗಳಲ್ಲಿ ಗಂಟೆಗಟ್ಟಲೆ ಮಾತನಾಡಿ, ಅಸಾಧ್ಯ ಚರ್ಚೆಗಳನ್ನು ನಡೆಸಿ, ಸೂಚನೆಗೊಂದು ಉಪಸೂಚನೆ, ಗೊತ್ತುವಳಿಗೊಂದು ತಿದ್ದುಪಡಿ ತಂದು ಪತ್ರಿಕೆಗಳ ಅಂಕಣಗಳನ್ನೆಲ್ಲಾ ತುಂಬುವ ಮಹನೀಯರುಗಳೆಲ್ಲಾ `ಸರ್ವಶಕ್ತ ಭಗವಂತ'ರೇ ಆಗಬೇಕಲ್ಲವೇ? ನನಗೆ ಈ ಬಿರುದು ಬಾವಲಿಗಳ ವರದಿ ಬೇಕಾಗಿಲ್ಲ. ನಾನಿಂದು ಅಖಂಡ ಭಾರತವನ್ನೆಲ್ಲಾ ಬೇಡುತ್ತಿರುವುದು ಒಂದು ತುತ್ತು ಅನ್ನ, ಒಂದು ಮೊಳ ಬಟ್ಟೆ. ನನ್ನ ಜನಕ್ಕಾಗಿ ನಾನಿದನ್ನು ಬೇಡುತ್ತಿದ್ದೇನೆ. ಅವರಿಗೆ ಇಂದು ನಿಲ್ಲಲು ನೆಲೆಯಿಲ್ಲ, ತಿನ್ನಲು ಅನ್ನವಿಲ್ಲ, ಉಡಲು ಬಟ್ಟೆಯಿಲ್ಲ, ಮಲಗಲು ತಾವೇ ಇಲ್ಲ. ಅವರಿಂದು ಪ್ರವಾಹಗಳಲ್ಲಿ ಕೊಚ್ಚಿಹೋಗುತ್ತಿದ್ದಾರೆ, ಬೆಂಕಿಯಲ್ಲಿ ಭಸ್ಮವಾಗುತ್ತಿದ್ದಾರೆ, ಕ್ಷಾಮದಲ್ಲಿ ಪುಡಿಪುಡಿಯಾಗಿದ್ದಾರೆ, ಮನೆಗಳು ಕುಸಿದು ಬಿದ್ದು ಹಾಗೆಯೇ ಮಣ್ಣುಕಂಡಿದ್ದಾರೆ. ಇಷ್ಟಾದರೂ ರಕ್ತದ ಕೋಡಿಯಲ್ಲಿ ಮೀಯುವ ಅವರ ಚಪಲ ತಪ್ಪಿಲ್ಲ. ನನ್ನ ಜೀವಮಾನವೆಲ್ಲಾ ಬೋಧಿಸುತ್ತಾ ಬಂದಿರುವ ನೀತಿ ಅವರಿಗೆ ರುಚಿಸಿಲ್ಲ. ಎಲ್ಲಿ ನನ್ನವರಿರುವರೆಂಬ ಭರವಸೆಯಿತ್ತೋ ಅಲ್ಲೆಲ್ಲಾ ನನ್ನವರು ಬೇರೆಯವರಾಗುತ್ತಿದ್ದಾರೆ. ಯಾದವೀ ಕಲಹದಲ್ಲಿ ಪಾಲ್ಗೊಂಡಿದ್ದಾರೆ. ನನ್ನ ಮುಖಕ್ಕೆ ರಕ್ತವೆರಚುತ್ತಿದ್ದಾರೆ. ನನ್ನ ಹೃದಯ ಇದನ್ನೆಲ್ಲಾ ಕಂಡು ಕೇಳಿ ಶಾಂತವಾಗುವುದೆಂದರೆ ಹೇಗೆ ತಾನೇ ಸಾಧ್ಯ?'
`ಎಲ್ಲಿ?' ಎಂದೆ, ನಾನು ಬೆಚ್ಚಿಬಿದ್ದು.
`ಅಹಮದಾಬಾದಿನಲ್ಲಿ ನನ್ನವರು ಹೇಗೆ ಕಾದು ಮಡಿದಿದ್ದಾರೆ ನೋಡು. ಹಿಂದೂ ಮುಸ್ಲಿಂ ಜಗಳದಲ್ಲಿ ಎಷ್ಟೊಂದು ಜನ ರಕ್ತದ ಕೋಡಿ ಹರಿಸಿದ್ದಾರೆ, ನೆನೆಸಿಕೊ. ಇನ್ನು ಇಂತಹವರನ್ನು ನನ್ನವರು ಎಂದು ಹೇಗೆ ತಾನೇ ಎನ್ನಲಿ? ನನ್ನವರಲ್ಲ ಎಂದು ತಾನೇ ಹೇಗೆ ದೂರವುಳಿಯಲಿ? ನನ್ನ ದೇಶ ಏಕೆ ಹೀಗಾಯ್ತು? ದಾಸ್ಯದ ಒತ್ತಡವೊಂದೆಡೆ, ಶತ್ರುವಿನ ಧಾಳಿ ಮತ್ತೊಂದೆಡೆ, ಕ್ಷಾಮದ ಬಾಧೆಯಿನ್ನೊಂದೆಡೆ, ಪ್ರವಾಹದ ಹಾವಳಿಗಳು ಹಲವೆಡೆ, ಮಳೆಯ ಅನಾಹುತಗಳು ಬೇರೊಂದೆಡೆ, ಅಂತಃಕಲಹಗಳು ಎಲ್ಲೆಡೆ ... ಹೀಗೆ ಒಂದೊಂದೂ ನನ್ನ ದೇಹವನ್ನು ಕತ್ತಿಯಿಂದ ತಿವಿಯುತ್ತಿದೆಯಲ್ಲಾ, ಇವೆಲ್ಲಾ ಸಹಿಸಿಕೊಂಡು ಶಾಂತವಾಗಿರಲೇನು ನಾನು?'
`ಬಾಪೂಜೀ, ಇದು ನಮ್ಮ ದುರದೃಷ್ಟ. ನಿಮ್ಮಂತಹ ಲೋಕನಾಯಕರನ್ನು ಪಡೆದೂ ಸಹ ನಾವು ಈ ದುರವಸ್ಥೆ ಪಡಬೇಕೆಂದರೆ ಮಹಾ ಪಾಪಿಗಳು ನಾವು. ಹೀಗೆಂದು, ಬಾಪೂಜೀ, ನೀವು ನಮ್ಮ ಕೈಬಿಡುತ್ತೀರಾ?'
`ಕೈಬಿಡುವುದಕ್ಕಾಗಿಯಲ್ಲ ನಾನು ಹುಟ್ಟಿರುವುದು. ನನ್ನ ಜನ್ಮವನ್ನೆಲ್ಲ ಸೇವಕನಂತೆ ಸವೆಸಬೇಕೆಂದು ಇಚ್ಛಿಸಿದ್ದೇನೆ. ಎಲ್ಲ ಸೇವಕರಲ್ಲೂ ಸೇವಕನೆನಿಸಿ ...'
`ಎಲ್ಲ ಮಹಾತ್ಮರಲ್ಲೂ ಮಹಾತ್ಮರೆನಿಸಿ ...' ಎಂದೆ ನಾನು.
`... ಹಾಗೆನ್ನಬೇಡ ... ಎಲ್ಲರ ಪಾಪಕ್ಕಾಗಿ ನರಳಿ, ದೇವನ ಕ್ಷಮಾಪಣೆಯನ್ನು ದೇಶಕ್ಕೆ ದೊರಕಿಸಿಕೊಡುವುದೇ ನನ್ನ ಅಭೀಷ್ಟ. ಅದು ನೆರವೇರಿದರೆ ...'
`ದೇಶವೇ ಉದ್ಧಾರವಾಗುವುದು ಅಲ್ಲವೇ, ಬಾಪೂಜಿ?'
`ಅಷ್ಟರಿಂದ ಮಾತ್ರ ಉದ್ಧಾರವಾಗದು. ನನ್ನ ನಾಡು. ಅದು ಇಂದಲ್ಲ, ನಾಳೆ ಸ್ವಾತಂತ್ರ್ಯದ ಕಹಳೆ ಊದಲೇ ಬೇಕು. ಸ್ವಾತಂತ್ರ್ಯ ಸಂಗರದಲ್ಲಿ ನಾವು ಗೆಲ್ಲಲೇಬೇಕು ...'
`... ಮತ್ತಾವ ಸ್ವಾತಂತ್ರ್ಯ ಸಂಗರ, ಬಾಪೂಜೀ? ಹೋದ ಸಲದ ಸ್ವಾತಂತ್ರ್ಯ ಸಂಗರವೇ ನಿಮ್ಮ ಜೀವಮಾನದಲ್ಲಿ ಕೊನೆಯ ಸಂಗ್ರಾಮವೆನ್ನುತ್ತಿದ್ದಿರಲ್ಲಾ ಬಾಪೂಜೀ!'
`ಹೌದು, ಅಲ್ಲವೆಂದವರಾರು? ಅಥವಾ ಆ ಸಂಗ್ರಾಮ ಕೊನೆಗಂಡಿತೆಂದವರಾರು? ಅದು ... ನನ್ನ ಜೀವಮಾನದಲ್ಲಿ ಮಾತ್ರವೇ ಅಲ್ಲ, ದೇಶದ ಜೀವಮಾನದಲ್ಲೂ ಅಷ್ಟೆ, ಕೊನೆಯ ಸಂಗ್ರಾಮ. ಮತ್ತೊಂದು ಹೊಸ ಸಂಗ್ರಾಮವೇನೂ ಬೇಕಾಗಿಲ್ಲ. ಹಿಂದಿನದೇ ಮುಂದುವರಿಯುತ್ತದೆ, ಅಷ್ಟೆ. ಎಂದರೆ ಈ ಸಲ ಅದರ ರೀತಿ ಹೊಸದಾದೀತು, ಅದರ ನೀತಿ ಹೊಸದಾದೀತು. ದೇಶವೊಂದೇ ... ಯುದ್ಧವೊಂದೇ ... ಸ್ವಾತಂತ್ರ್ಯ ಸಹಾ ಒಂದೇ.'
`ನೀವು ಪುನರ್ಜನ್ಮ ಬಯಸುತ್ತೀರಾ, ಬಾಪೂಜೀ?'
`ಅದೇಕೆ ಬಯಸಲಿ? ನಾನು ಹಿಂದೂ, ನಾನು ಮೋಕ್ಷಾಭಿಲಾಷಿ. ಮತ್ತೊಮ್ಮೆ ಹುಟ್ಟುವುದನ್ನು ನಾ ಬಯಸೆನು.'
`ಇಲ್ಲ ಬಾಪೂಜೀ, ದೇಶದ ಹಿತಕ್ಕಾಗಿ, ರಾಷ್ಟ್ರದ ಕಲ್ಯಾಣಕ್ಕಾಗಿ, ವಿಶ್ವದ ಸೌಖ್ಯಕ್ಕಾಗಿ ನೀವು ಮತ್ತೊಮ್ಮೆ ಜನಿಸಲೇಬೇಕು. ನಾವು ಪಾಮರರು. ಈ ಜನ್ಮದಲ್ಲಿ ನಾವು ನಿಮ್ಮನ್ನು ಪೂರ್ತಿಯಾಗಿ ಅನುಸರಿಸಲು ಶಕ್ತರಾಗಲಾರೆವು. ನಮ್ಮನಾಡು ಸ್ವತಂತ್ರವಾಗಿ, ನಾವದರ ಸತ್ಪ್ರಜೆಗಳಾಗಿ ಮುಂದುವರಿಯಬೇಕಾದರೆ ನೀವು ಮತ್ತೊಮ್ಮೆ ನಮ್ಮ ನಾಡಿನಲ್ಲೇ ಜನಿಸಿ, ಸ್ವತಂತ್ರವಾದ ಭಾರತೀಯರನ್ನು ಸನ್ಮಾರ್ಗದಲ್ಲಿ ನಡೆಸಬೇಕು. ಅಷ್ಟಲ್ಲದೆ ನಮ್ಮನ್ನು ಕೈಬಿಟ್ಟಿರೆಂದರೆ ನಾವಂತೂ ಮುಂಬರಿದು ಜಗತ್ತಿನಲ್ಲಿ ನಮ್ಮ ಸ್ಥಾನಮಾನಗಳನ್ನು ರಕ್ಷಿಸಿಕೊಳ್ಳುವ ಆಸೆಯಂತೂ ಇಲ್ಲವೇ ಇಲ್ಲ. ಇದೊಂದು ದೇಶದ ಕೋರಿಕೆ, ಅವಶ್ಯಕತೆ.'
`ಇಲ್ಲ, ನನ್ನ ಈ ಜೀವಮಾನದಲ್ಲೇ ಸ್ವತಂತ್ರ ಭಾರತವನ್ನು ಕಂಡೇನು ನಾನು. ಅವರನ್ನು ಸ್ವರ್ಣಪಥದಲ್ಲಿ ನಡೆಸೇನು. ರಾಷ್ಟ್ರದ ನಿಜವಾದ ಸೇವಕನೆನಿಸಿಕೊಂಡೇನು. ನನ್ನ ಬೋಧನೆಯನ್ನು ನನ್ನವರೆಲ್ಲಾ ಕೇಳಿದರೆ ಒಂದೇ ದಿನದಲ್ಲಿ ನಾವು ಏನುಬೇಕಾದರೂ ಆದೇವು. ಆದರೆ ರಾಷ್ಟ್ರದ ದುರದೃಷ್ಟ. ನನ್ನ ದುರದೃಷ್ಟ. ನಾವಿನ್ನೂ ಹಾಗೆ ಆಗಿಲ್ಲ. ಆ ಕಾಲ ಇನ್ನೇನು ದೂರವಿಲ್ಲ. ಹತ್ತಿರ ಬರುತ್ತಿದೆಯೆಂದೇ ನನ್ನ ನಂಬಿಕೆ.'
ಆವೇಶಪೂರಿತರಾಗಿ ಗಾಂಧೀಜಿ ಮಾತನಾಡಿ ತುಸುಹೊತ್ತು ಮೌನವಾಗಿ ಕೂಡುವರು. ಅನಂತರ `ಈಗಾಗಲೇ ನಾ ಬಂದು ಒಂದು ಗಂಟೆಯಾಗಿರಬಹುದು. ಬರುತ್ತೇನೆ' ಎಂದು ಹೇಳಿ ಹೊರಡನಿಲ್ಲುವರು.
`ತಮ್ಮ ದರ್ಶನ ಭಾಗ್ಯ ಮತ್ತೆಂದು?' ಎನ್ನುವೆ.
`ಸ್ವತಂತ್ರ ಭಾರತದಲ್ಲಿ!' ಎಂದು ಉತ್ತರ ಬರುವುದು.
ಆ ದನಿಯನ್ನಾಲಿಸಿ ಅನುಸರಿಸುವ ಹೊತ್ತಿಗಾಗಲೇ ಆಗಾಖಾನ್ ಅರಮನೆಯಲ್ಲಿ ಅದು ಮಾರ್ದನಿಗೊಡುವುದು.

No comments:
Post a Comment