
’ತಾಯಿನಾಡು’ವಿನಲ್ಲಿ ’ನಾರದ ಉವಾಚ’ ಎಂಬ ದೈನಿಕ ಟೀಕಾಂಕಣ ಬರೆಯುತ್ತಿದ್ದಂತೆ, ’ಸಂಯುಕ್ತ ಕರ್ನಾಟಕ’ ಪತ್ರಿಕೆಯಲ್ಲಿ ನಾಗೇಶರಾವ್ ಆರಂಭಿಸಿದ್ದು ’ಚಿಟಿಕೆ ಚಪ್ಪರ’ ಎಂಬ ಅಂಕಣ. ರಾಜ್ಯದ ಇಂದಿನ ಸ್ಥಿತಿಗೆ ಕ್ಯಾಬಿನೆಟ್ ಮಟ್ಟದಲ್ಲಿ ಪ್ರಾತಿನಿಧ್ಯವಿಲ್ಲದಿರುವುದೂ ಒಂದು ಕಾರಣ. ಆದರೆ ಈ ಬಗೆಯ ಮಲತಾಯಿ ದರ್ಬಾರು ಕರ್ನಾಟಕಕ್ಕೆ (ಮೈಸೂರಿಗೆ) ಹೊಸತಲ್ಲ. 1964ರಲ್ಲಿಯೂ (ಅಥವಾ ಅಂದಿನಿಂದಲೂ) ಇಂಥದೇ ಪರಿಸ್ಥಿತಿ. ಈ ಬಗ್ಗೆ ’ಚಿಟಿಕೆ ಚಪ್ಪರ’ದಲ್ಲಿ ಯಾವ ರೀತಿ ಚರ್ಚಿಸಲಾಗಿತ್ತು? ಓದಿ ನೋಡಿ.
ಕೇಂದ್ರದ ನೂತನ ಮಂತ್ರಿಮಂಡಲದಲ್ಲಿಯೂ ಮೈಸೂರು ರಾಜ್ಯದ ಪ್ರಾತಿನಿಧ್ಯ ಏರದೆ, ಶ್ರೀ ಎಚ್.ಸಿ. ದಾಸಪ್ಪನವರೊಬ್ಬರು ಮಾತ್ರ ಸಂಪುಟ ದರ್ಜೆಯ ಸಚಿವರಾಗಿ ಮುಂದುವರಿದಿದ್ದಾರೆ.
- ಇದೇ ಸಮಯದಲ್ಲಿ ಆಂಧ್ರದ ಪ್ರಾತಿನಿಧ್ಯವಾದರೋ ಸಂಪುಟ ಮಟ್ಟದಲ್ಲಿ ಇನ್ನೊಂದು ಸಂಖ್ಯೆ ಹೆಚ್ಚಾಗಿ, ಶ್ರೀ ಸಂಜೀವ ರೆಡ್ಡಿಯವರು ಪ್ರಾಮುಖ್ಯದ ಉಕ್ಕಿನ ಶಾಖೆ ಸಚಿವರಾಗಿದ್ದಾರೆ !
.... * *
"ಲಾಲ್ ಬಹದ್ದೂರರಿಗೆ ರಾಜ್ಯ ಬಂದರೂ ಮೈಸೂರಿನವರಿಗೆ ಮಾತ್ರ ಅನ್ಯಾಯ ತಪ್ಪಲಿಲ್ಲ" ಎಂದು ಕನ್ನಡಿಗರು ನ್ಯಾಯವಾಗಿಯೇ ಕೊರಗಬೇಕಾಗಿ ಬಂದಿದೆ, ಈಗ!
- ಹಿಂದೊಮ್ಮೆ ಕೇಂದ್ರ ಸಂಪುಟದಲ್ಲಿ ಮೈಸೂರಿನ ಒಬ್ಬರು `ಕ್ಯಾಬಿನೆಟ್' ದರ್ಜೆಯ ಮಂತ್ರಿಗಳೂ, ಇಬ್ಬರು `ಸ್ಟೇಟ್' ದರ್ಜೆಯ ಮಂತ್ರಿಗಳೂ, ಒಬ್ಬಿಬ್ಬರು ಉಪ ಮಂತ್ರಿಗಳು ಇದ್ದುದು ಕ್ರಮೇಣ ಕರಗುತ್ತಾ ಬಂದು ಈಗ ಕೇವಲ ಒಂದಕ್ಕೇ ನಿಂತಿದೆ! ಕನ್ನಡಿಗರು ಹೀಗೇ ಕಣ್ಣು ಮುಚ್ಚಿ ಕುಳಿತಿದ್ದರೆ, ಈ ಅಂಕಿ ಶೂನ್ಯಕ್ಕೇ ಇಳಿದರೂ ಅಚ್ಚರಿಯಿಲ್ಲ, ಭವಿಷ್ಯದಲ್ಲಿ !!
.... * *
ಸದ್ಯಕ್ಕೆ, ದಕ್ಷಿಣ ರಾಜ್ಯಗಳಲ್ಲಿ ಮೈಸೂರು ರಾಜ್ಯವೇ ಹಿಂದು, ಈ ಸಚಿವ ಪದವಿಗಳಲ್ಲಿ:- ಆಂಧ್ರ ಪ್ರದೇಶಕ್ಕೆ ಸಂಪುಟದಲ್ಲಿ ೨ ಸ್ಥಾನ, `ಸ್ಟೇಟ್' ದರ್ಜೆಯಲ್ಲಿ ೨ ಸ್ಥಾನ - ಒಟ್ಟು ನಾಲ್ಕು; ಮದ್ರಾಸಿಗೆ ಸಂಪುಟದಲ್ಲಿ ೨, `ಸ್ಟೇಟ್' ದರ್ಜೆಯಲ್ಲಿ 1 - ಒಟ್ಟು ಮೂರು; ಕೇರಳಕ್ಕೆ `ಸ್ಟೇಟ್' ದರ್ಜೆಯ ಒಟ್ಟು ಎರಡು ಸ್ಥಾನ! ಇನ್ನು ಉಪಸಚಿವ ಪದವಿಗಳಲ್ಲೂ ಎಷ್ಟೆಷ್ಟು ಸ್ಥಾನಗಳನ್ನು (ಮೈಸೂರಿಗಿಲ್ಲದೆ) ಈ ನೆರೆ ರಾಜ್ಯಗಳು ಮಾಮೂಲಿನಂತೆ ಪಡೆಯುವುವೋ ?!
- ಮೈಸೂರಿಗೆ ಈಗ ಕೇಂದ್ರದಲ್ಲಿ ಉಳಿದಿರುವುದು ಮೂರೇ ಮೂರು `ಉಪ' ಪದವಿಗಳು: ಸಂಸತ್ ಕಾಂಗ್ರೆಸ್ ಪಕ್ಷದ ಉಪನಾಯಕ ಸ್ಥಾನ (ಶ್ರೀ ಕೆ.ಸಿ. ರೆಡ್ಡಿ); ಲೋಕಸಭೆಯ ಉಪಾಧ್ಯಕ್ಷತೆ (ಶ್ರೀ ಎಸ್.ವಿ. ಕೃಷ್ಣಮೂರ್ತಿ ರಾವ್); ಮತ್ತು ರಾಜ್ಯಸಭೆಯ ಉಪಸಭಾಪತಿ ಪದವಿ (ಶ್ರೀಮತಿ ವಯೊಲೆಟ್ ಆಳ್ವ)!
ಅವಾದರೂ ಗಟ್ಟಿಯಾಗಿ ಉಳಿದರೆ ಸಾಕೆಂದಷ್ಟೇ ಕನ್ನಡಿಗರು ಭುವನೇಶ್ವರಿಯಲ್ಲಿ ಪ್ರಾರ್ಥಿಸಬೇಕೇನೋ?!
* *
ಅಂತೂ ಪ್ರಾತಿನಿಧ್ಯ-ಪ್ರಭಾವಗಳಲ್ಲಿ ಭಾರತದಲ್ಲಿ ಉತ್ತರ ಪ್ರದೇಶವನ್ನು ಬಿಟ್ಟರೆ ಎರಡನೇ ಸ್ಥಾನ ಆಂಧ್ರ ಪ್ರದೇಶಕ್ಕೆ ದೊರೆತಿರುವುದು ಗಮನಾರ್ಹ! ಅಷ್ಟೇಕೆ, ರಾಷ್ಟ್ರಪತಿ ಸ್ಥಾನವೇ ಆಂಧ್ರದ್ದು; ಇನ್ನು ರಾಜ್ಯಪಾಲ ಪದವಿಗಳಲ್ಲಂತೂ ರಾಷ್ಟ್ರದ ಐದು ರಾಜ್ಯಗಳಲ್ಲಿ ಆಂಧ್ರದವರೇ !!
- "ಆದರೆ, ಮೈಸೂರಿನ ರಾಜಕೀಯವನ್ನು ಚೆನ್ನಾಗಿ ಅರಿತ ಶ್ರೀ ಲಾಲ ಬಹದ್ದೂರರಾದರೂ ಮೈಸೂರಿಗೆ ನ್ಯಾಯ ದೊರಕಿಸಬಾರದಿತ್ತೇ?" ಎಂದು ವಾಚಕರು ಕೇಳಬಹುದು; ಮೈಸೂರಿನ ರಾಜಕೀಯದಲ್ಲಿನ ಭಿನ್ನತೆ, ಅನೈಕ್ಯ, ಅಸೂಯೆಗಳನ್ನು ಚೆನ್ನಾಗಿ ಅರಿತಿರುವುದರಿಂದಲೇ ಶ್ರೀ ಶಾಸ್ತ್ರಿಗಳು ಮೈಸೂರಿನವರಿಗೆ ಪ್ರಾಶಸ್ತ್ಯ ಕೊಡಲು ಹಿಂಜರಿದಿರಬೇಕೆಂದೂ ಊಹಿಸಬಹುದು !
... * *
ಏಕೆಂದರೆ, ಮೈಸೂರು ರಾಜ್ಯದಲ್ಲಿ ಒಮ್ಮತವಿಲ್ಲ; ಮೈಸೂರು ಕಾಂ. ರಾಜಕಾರಣದಲ್ಲಿ ಒಮ್ಮತವಿಲ್ಲ; ಮೈಸೂರು ಸಚಿವರಲ್ಲಿ ಒಮ್ಮತವಿಲ್ಲ; ಮೈಸೂರು ಎಂ.ಪಿ.ಗಳಲ್ಲಿ ಒಮ್ಮತವಿಲ್ಲ - ಹೀಗಾಗಿ ಯಾರನ್ನು ತೆಗೆದುಕೊಂಡರೆ ಇತರರಿಗೆ ಹೇಗೋ ಎಂಬ ಗಾಬರಿಯಿಂದಲೇ ಪ್ರಧಾನಿಗಳು ನಮ್ಮ ರಾಜ್ಯದ ಕೈ ಬಿಡುತ್ತಿರಬಹುದು!
- "ಇವರು ಭಿನ್ನಮತೀಯರು; ಇವರು ಅನ್ಯಮತೀಯರು; ಇವರು ಆಡಳಿತ ಗುಂಪಿನವರು; ಇವರು ಅವಿಶ್ವಾಸ ಮಂಡನೆಯ ಗುಂಪಿನವರು; ಇವರು ನಂಬಿಕೆಗನರ್ಹರು; ಇವರನ್ನು ಮುಂದಕ್ಕೆ ತಂದರೇ ರಾಜ್ಯದಲ್ಲಿ ಅಶಾಂತಿ" ಎಂದು ಮುಂತಾಗಿ ಮೈಸೂರಿನ `ಪ್ರಭಾವಿಗಳು' ಮೈಸೂರಿನವರ ವಿರುದ್ಧವೇ ಅಪಪ್ರಚಾರ - ನಿರುತ್ತೇಜನ - ನಿರಭಿಮಾನ ಪ್ರದರ್ಶಿಸತೊಡಗಿದರೆ, ಕೇಂದ್ರದವರಿಗೇಕೆ ನಮ್ಮಲ್ಲಿ ಮಮತೆ ಹುಟ್ಟೀತು?!
*`ಸಂಯುಕ್ತ ಕರ್ನಾಟಕ' 11-06-1964 ಸಂಪಾದಕೀಯ ಪುಟದ `ಚಿಟಿಕೆ ಚಪ್ಪರ' ನಿತ್ಯ ಟೀಕಾಂಕಣದಿಂದ
No comments:
Post a Comment