ಸುದ್ದಿಜೀವಿ

ಸುದ್ದಿಜೀವಿ
ನಾಗೇಶರಾವ್

Sunday, May 03, 2009

ವಾಸ್ತವಿಕ ಪ್ರಪಂಚದ ಬಗ್ಗೆ ಕಲ್ಪನೆಯ
ಪ್ರೇಯಸಿಗೆ ಕಾಗದಗಳು!

ಸಾಧನಾ
[ಲೇಖಕರು - ನಿರಂಜನ; ಪ್ರಕಾಶಕರು - ಪುರೋಗಾಮಿ ಪ್ರಕಾಶನ, ಬಸವನಗುಡಿ,ಬೆಂಗಳೂರು-೪; ಬೆಲೆ-ರೂ.೧-೮-೦]
ಪ್ರಚಲಿತ ಜಗತ್ತಿನಲ್ಲಿ - ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ, ಪುಸ್ತಕ-ಪತ್ರಿಕಾ ಪ್ರಪಂಚಗಳಲ್ಲಿ, ಸುದ್ದಿಯ ವಿಶ್ವದಲ್ಲಿ ನಡೆದ ವಿವಿಧ ಘಟನೆಗಳನ್ನು, ವರದಿಗಳನ್ನು ತಮ್ಮ ವಿಶಿಷ್ಟ ದೃಷ್ಟಿಕೋನದಿಂದ ವಿಮರ್ಶಿಸುವುದರಲ್ಲಿ, ವಿವೇಚಿಸುವುದರಲ್ಲಿ ಹೆಸರಾದ ಶ್ರೀ `ನಿರಂಜನ'ರು ತಮ್ಮ ಕಲ್ಪನೆಯ (?) ಪ್ರೇಯಸಿ `ಸಾಧನಾ'ಳಿಗೆ `ಜನಪ್ರಗತಿ'ಯ ಮೂಲಕ ಕಳಿಸಿ ಕೊಟ್ಟ `ಮೇಘ ಸಂದೇಶ'ದ ಆರಿಸಿದ ಸಂಗ್ರಹ ಈ ಪುಸ್ತಕ. ಶ್ರೀ `ನಿರಂಜನ'ರ ಮೇಘ ಸಂದೇಶದಲ್ಲಿ ಪ್ರಣಯವು ವಿಚಾರ ವಿಮರ್ಶೆಯ ಎಳೆಗಳ ನಡುವೆ ಜರತಾರಿ ಅಂಚು-ಚಿತ್ರಗಳಂತೆ ಅಲ್ಲಲ್ಲಿ ಮಿ೦ಚುವುದೇ ಹೊರತು ಕೇವಲ ಪ್ರಣಯವನ್ನು ತೋಡಿಕೊಳ್ಳುವುದೇ ಅದರ ಉದ್ದೇಶವಲ್ಲ. ಯಾವುದೇ ಪ್ರಮುಖ ವಿಷಯದ ಬಗ್ಗೆ ಎಷ್ಟೇ ವಿಚಾರಪೂರಿತವೂ ಗ೦ಭೀರವೂ ಆದ ಪ್ರಬ೦ಧವನ್ನು ಬರೆದರೂ ಅದು ಎಲ್ಲಾ ಓದುಗರಿಗೂ ಹಿಡಿಸದು; ಆದರೆ ಅದಕ್ಕೆ ಪ್ರಣಯ ಪತ್ರದ ಚೌಕಟ್ಟು ಹಾಕಿದರೆ ಎ೦ತಹ ತೀವ್ರ ವಿಷಯವನ್ನಾಗಲೀ ಓದುಗರು ಆಸಕ್ತಿಯಿ೦ದ ಓದುತ್ತಾರೆ. `ಜನಪ್ರಗತಿ'ಯಲ್ಲಿ ಅವ್ಯಾಹತವಾಗಿ ಬರುತ್ತಿರುವ ಈ ಪತ್ರಮಾಲೆಯೇ ಕನ್ನಡ ಓದುಗರ ಮೇಲಿನ ಈ ಸತ್ವ ಪರೀಕ್ಷೆಗೆ ಸಾಕ್ಷಿ. ಪ್ರತಿ ಯುವಕ ಯುವತಿಯೂ ಈ ಸ೦ಕಲನವನ್ನು ಆಸಕ್ತಿಯಿಟ್ಟು ಓದುವುದರಲ್ಲಿ ಸ೦ಶಯವಿಲ್ಲ.
ಶ್ರೀ `ನಿರಂಜನ'ರು ಈ ಬಗೆಯ ರಚನಾ ಕೌಶಲ್ಯದಲ್ಲಿ ಸಿದ್ಧ ಹಸ್ತರಾಗಿದ್ದಾರೆ; ಪತ್ರಿಕೆಗಳ ಯಾವ ಮೂಲೆಯಲ್ಲೋ ಸರಿಯಾಗಿ ಗಮನಕ್ಕೆ ಬಾರದೆ ಹೋದ ಎರಡು ಮೂರು ಸಾಲಿನ ಸುದ್ದಿಗಳನ್ನವರು ಎತ್ತಿ, ಅದನ್ನು ವಿಸ್ತರಿಸಿ ಅದಕ್ಕೆ ನ್ಯಾಯವಾಗಿ ಸಲ್ಲಬೇಕಾದ ಮನ್ನಣೆಯನ್ನು ತೋರಿಸಿದ್ದಾರೆ. ಯಾವುದೇ ಕ್ಷೇತ್ರದಲ್ಲಿ ಅನ್ಯಾಯವಾಗಿರುವ ವರದಿಗಳು ಕ೦ಡು ಬ೦ದರೂ, ಅದರ ಬೆನ್ನು ಹತ್ತಿ ಮೂಲವನ್ನು ಶೋಧಿಸಿ, ನೋವಿನ ಆಳವನ್ನು ಚಿತ್ರಿಸಿದ್ದಾರೆ. ಕುತೂಹಲಕರ, ಕೋಲಾಹಲಕರ ಪ್ರಸ೦ಗ-ವಿಷಯಗಳನ್ನ೦ತೂ ಅವರು ಸು೦ದರವಾಗಿ, ಸ್ವಾರಸ್ಯವಾಗಿ `ಸಾಧನಾ'ಗೆ ವರ್ಣಿಸುವುದನ್ನು ಓದಿದಾಗ ವಾಚಕರನ್ನು ಮಾ೦ತ್ರಿಕನ ಮಾತಿಗೆ ಮುಗ್ಧರಾಗುವ ರೀತಿ ಮಾಡುವುದು. ಇ೦ತಹ ಸಿದ್ಧ ಹಸ್ತವನ್ನುಳ್ಳ ಶ್ರೀ `ನಿರ೦ಜನ'ರು ಇತ್ತೀಚಿಗೆ ಅಪಘಾತ ಒ೦ದಕ್ಕೀಡಾಗಿ ಮೂಳೆ ಮುರಿದುಕೊ೦ಡು ಮೂಕವ್ಯಥೆ ಪಟ್ಟುದನ್ನು ಈ ಸ೦ಕಲನದ ಕೊನೆಯ ಪತ್ರದಲ್ಲಿ ಓದಿದಾಗ ಕಣ್ಣಲ್ಲಿ ನೀರು ಬರುವುದು. ಆ ಹಸ್ತವನ್ನು ಕನ್ನಡಿಗರಿಗಾಗಿ ಉಳಿಸಿಕೊಟ್ಟ ಸರ್ಜನ್ ಶ್ರೀ ಕೆ. ಕೃಷ್ಣಮೂರ್ತಿಯವರಿಗೆ ಈ ಸ೦ಗ್ರಹವನ್ನು ಅರ್ಪಿಸಿರುವುದು ನ್ಯಾಯವಾಗಿಯೇ ಇದೆ.
- `ಪುಸ್ತಕಪ್ರಿಯ'
ತಾಯಿನಾಡು, ೨೮-೧೧-೧೯೫೩

No comments: